‘ಬಿಎಸ್‌ವೈ ನಾಯಕತ್ವ ಬದಲಾಗದು’


ಬೆಂಗಳೂರು, ಏ. ೭- ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಾಯಿಸಲಾಗುವುದು ಎಂಬುದನ್ನು ನಿರಾಕರಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ನಾನು ಯಾರಿಗೂ ದೂರು ನೀಡಿಲ್ಲ. ಯಡಿಯೂರಪ್ಪನವರೇ ನನ್ನ ನಾಯಕರು ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಅನುದಾನವನ್ನು ನೇರವಾಗಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಅವರಿಂದ ೧೯೭೯ರ ಟ್ರಾನ್‌ಜ್ಯಾಕ್ಷನ್ ಕಾಯ್ದೆಯ ಬಗ್ಗೆ ಸ್ಪಷ್ಟನೆ ಪಡೆದುಕೊಂಡೆ. ರಾಜ್ಯಪಾಲ ವಜುಭಾಯಿವಾಲಾ ಗುಜರಾತ್‌ನಲ್ಲಿ ಅರ್ಥ ಸಚಿವರಾಗಿ ೧೧ ಬಜೆಟ್ ಮಂಡಿಸಿದ್ದರು. ನಾನು ಮುಖ್ಯಮಂತ್ರಿ ವಿರುದ್ಧ ದೂರು ನೀಡಿಲ್ಲ ಎಂದು ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡಿದ್ದೇನೆ. ಅವರ ವಿರುದ್ಧ ಸಿಡಿದ್ದೆದ್ದಿದ್ದೇನೆ ಎಂಬುದೆಲ್ಲಾ ಹುಸಿ ಸುಳ್ಳು. ಯಡಿಯೂರಪ್ಪನವರೆ ನನ್ನ ನಾಯಕರು, ಅವರೇ ನಮ್ಮ ಮುಖ್ಯಮಂತ್ರಿ. ಯಡಿಯೂರಪ್ಪನವರ ನಾಯಕತ್ವ ಬದಲಾಗಲಿದೆ ಎಂಬುದೆಲ್ಲಾ ಕಟ್ಟು ಕತೆ. ಈ ಕಟ್ಟು ಕತೆಗಳನ್ನು ಸೃಷ್ಟಿಸುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರಿಗೆ ಪದ್ಮಶ್ರೀ ನೀಡಬೇಕು ಎಂದು ವಾಗ್ದಾಳಿ ನಡೆಸಿದರು.
ಇಲಾಖೆಯಲ್ಲಿ ಆಗುತ್ತಿರುವ ಕೆಲ ಸಮಸ್ಯೆಗಳ ಬಗ್ಗೆ ನಾನು ವರಿಷ್ಠರಿಗೂ ಪತ್ರ ಬರೆದಿದ್ದನೆ. ಅದು ದೂರಲ್ಲ. ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದೇನೆ. ಹಾಗೆಯೇ ಮುಖ್ಯಮಂತ್ರಿಗಳಿಗೂ ಪತ್ರ ಬರೆದು ಎಲ್ಲವನ್ನು ಹೇಳಿದ್ದೇನೆ. ಅನುದಾನ ನೀಡುವುದು ಮುಖ್ಯಮಂತ್ರಿಗಳ ಕರ್ತವ್ಯ. ಅನುದಾನವನ್ನು ಖರ್ಚು ಮಾಡುವುದು ಸಚಿವರ ಅಧಿಕಾರ. ಇದನ್ನು ನಾನು ಹೇಳಿದ್ದೇನೆ. ಇದನ್ನೇ ದೂರು ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಪಕ್ಷದ ವರಿಷ್ಠರೇ ಎಲ್ಲವನ್ನು ಬಗೆಹರಿಸುವುದಾಗಿ ಹೇಳಿದ್ದಾರೆ. ನಾಳೆ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಸಮಯ ಸಿಕ್ಕರೆ ಅವರನ್ನು ಭೇಟಿ ಮಾಡುತ್ತೇನೆ. ಅವರನ್ನು ಭೇಟಿ ಮಾಡಲು ನಾನು ಯಾರ ಅಪ್ಪಣೆಯನ್ನು ಪಡೆಯಬೇಕಿಲ್ಲ. ಆದರೆ ಭೇಟಿ ಮಾಡುತ್ತೇನೆ ಇಲ್ಲದಿದ್ದರೆ ಇಲ್ಲ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. ೩೮ ರಷ್ಟು ವಿವಿಧ ಯೋಜನೆಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಇಷ್ಟಾದರೂ ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯನವರು, ಈಶ್ವರಪ್ಪ ನಾಮಕಾವಸ್ಥೆ ಸಚಿವ. ನಾನು ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದರೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯುತ್ತಿರಲಿಲ್ಲ. ರಾಜೀನಾಮೆ ನೀಡುತ್ತಿದ್ದೆ ಎಂದೆಲ್ಲಾ ಮಾತನಾಡಿದ್ದಾರೆ. ಮೈಸೂರು ಮೇಯರ್-ಉಪಮೇಯರ್ ಆಯ್ಕೆ ಸಂದರ್ಭದಲ್ಲಿ ಸಿದ್ಧರಾಮಯ್ಯನವರನ್ನು ಕಾಂಗ್ರೆಸ್‌ನವರು ಮೂಲೆ ಗುಂಪು ಮಾಡಿದ್ದರು. ಮಾನ ಮರ್ಯಾದೆ ಇದ್ದಿದ್ದರೆ ಸಿದ್ಧರಾಮಯ್ಯ ಆಗಲೇ ರಾಜೀನಾಮೆ ಕೊಡಬೇಕಿತ್ತು. ಕಾಂಗ್ರೆಸ್ ಸಿದ್ಧರಾಮಯ್ಯನವರನ್ನು ತಿರಸ್ಕರಿಸಿದೆ. ಇಷ್ಟಾದರೂ ಅವರು ನನ್ನ ರಾಜೀನಾಮೆ ಕೇಳುತ್ತಾರೆ ಎಂದು ಹರಿಹಾಯ್ದರು.
ಬಿಜೆಪಿ ಶಿಸ್ತಿನ ಪಕ್ಷ. ಪಕ್ಷ ನನಗೆ ತಾಯಿ ಇದ್ದಂತೆ. ನನ್ನ ನಿಷ್ಠೆ ಪಕ್ಷಕ್ಕೆ. ನಾನಂತೂ ಶಿಸ್ತನ್ನು ಉಲ್ಲಂಘಿಸಿಲ್ಲ. ಬಹಿರಂಗವಾಗಿ ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಿಯೂ ಇಲ್ಲ, ದೂರು ನೀಡಿಲ್ಲ. ಹೀಗಿರುವಾಗ ಅಶಿಸ್ತು ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ಶಾಸಕ ಬಸನಗೌಡಪಾಟೀಲ್ ಯತ್ನಾಳ್ ದಿನ ಬೆಳಗಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರರ ವಿರುದ್ಧ ಮಾತನಾಡುವುದು ಸರಿಯಲ್ಲ. ದಾಖಲೆಗಳಿದ್ದರೆ ಯತ್ನಾಳ್ ಮಾತನಾಡಲಿ. ಸುಮ್ಮನೆ ದಾಖಲೆಗಳಿಲ್ಲದೆ ನಾಯಕತ್ವ ಬದಲಾವಣೆ ಎಂದೆಲ್ಲಾ ಮಾತನಾಡುವುದು ತರವಲ್ಲ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಪ್ರಗತಿಯಾಗಿಲ್ಲ ಎಂಬ ವಿರೋಧ ಪಕ್ಷದ ನಾಯಕರ ಆರೋಪಕ್ಕೆ ಉತ್ತರವಾಗಿ ಇಂದು ಪ್ರಗತಿ ವರದಿಯನ್ನು ಬಿಡುಗಡೆ ಮಾಡಿದ್ದೇನೆ ಎಂದು ಅವರು ಹೇಳಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಆಗಿರುವ ಪ್ರಗತಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಲ್ಲಿ ಆಗಿರುವ ಪ್ರಗತಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಪ್ರಗತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಗತಿ ಎಲ್ಲವನ್ನು ಅಂಕಿ ಅಂಶಗಳ ಸಮೇತ ವಿವರಿಸಿ, ಕಳೆದ ವರ್ಷಕ್ಕಿಂತ ಶೇ. ೩೮ ರಷ್ಟು ಪ್ರಗತಿಯಾಗಿದೆ ಎಂದರು.
ಪ್ರಧಾನಿ ಮೋದಿ ಅವರ ಕ್ಯಾಚ್ ದಿ ರೈನ್ ಜಲಶಕ್ತಿ ಅಭಿಯಾನ ಕಾರ್ಯಕ್ರಮ ಇದೇ ಏ. ೯ ರಂದು ಹುಬ್ಬಳ್ಳಿಯಲ್ಲಿ ಉದ್ಘಾಟನೆಯಾಗುತ್ತಿದ್ದು, ನೂರು ದಿನಗಳ ಈ ಯೋಜನೆಯಡಿ ರಾಜ್ಯದ ಎಲ್ಲೆಡೆ ಮಳೆ ನೀರನ್ನು ಸಂಗ್ರಹಿಸಿ ಭೂಮಿಗೆ ಇಂಗಿಸುವಂತಹ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.