ಬಿಎಸ್‌ವೈ ನಾಯಕತ್ವ ಡಿಸಿಎಂ ಸವದಿ ಸ್ಪಷ್ಟನೆ

ಬೆಂಗಳೂರು,ಜು. ೨೯- ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿರುವ ಬೆನ್ನಲ್ಲೆ ನಾಯಕತ್ವ ಬದಲಾವಣೆ ಕುರಿತಂತೆ ವರದಿಯಾಗಿರುವುದು ಹಾಗೂ ತಮ್ಮ ದೆಹಲಿ ಭೇಟಿ ಬಗ್ಗೆ ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಕಪೋಲ ಕಲ್ಪಿತ ವರದಿಗಳು ಬೇಡ. ರಾಜಕೀಯ ವಿಪ್ಲವಗಳ ಬಗ್ಗೆ ಮಾಧ್ಯಮಗಳು ಅಪ್ರಬುದ್ಧ ವಿಶ್ಲೇಷಣೆಯಲ್ಲಿ ತೊಡಗುವುದು ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿಕರ. ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡದಂತೆ ಜವಾಬ್ದಾರಿಯುತ ಮಾಧ್ಯಮಗಳಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.
ತಮ್ಮ ದೆಹಲಿ ಭೇಟಿಯ ಬಗ್ಗೆ ಅನಗತ್ಯವಾದ ಪ್ರಚಾರ ಬೇಡ. ದೆಹಲಿಯಲ್ಲಿ ವರಿಷ್ಠರೊಂದಿಗಿನ ಭೇಟಿ ಪೂರ್ವನಿರ್ಧಾರಿತ ಕಾರ್ಯಕ್ರಮ ಅದರ ಬಗ್ಗೆ ಕಪೋಲ ಕಲ್ಪಿತ ವರದಿ ಬೇಡ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಲಕ್ಷ್ಮಣ್ ಸವದಿ ಅವರ ದೆಹಲಿ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇದರ ಜತೆಗೆ ಅವರ ಕ್ಷೇತ್ರದ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಲಕ್ಷ್ಮಣ‌ಸವದಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಯಬಿಟ್ಟಿದ್ದರು. ಇವೆಲ್ಲವುಗಳನ್ನು ತಳ್ಳಿ ಹಾಕಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್‌ಸವದಿ, ಸಾಮಾಜಿಕ ಜಾಲತಾಣಗಳಲ್ಲಿ ದಯವಿಟ್ಟ ಆಧಾರ ರಹಿತ ಸುದ್ದಿಗಳನ್ನು ಹರಡಬೇಡಿ ಎಂದು ಮನವಿ ಮಾಡಿದ್ದಾರೆ.
ನಾವೆಲ್ಲರೂ ಪಕ್ಷಕ್ಕೆ ನಿಷ್ಠರು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರು ಎಂದು ಅವರು ಸ್ಪಷ್ಟಡಿಸಿದ್ದಾರೆ.
ನಮ್ಮ ಲಕ್ಷ್ಯ ಆರೋಗ್ಯ ಕ್ರಾಂತಿಯಕಡೆಗೆ ಇರುವ ಹೊತ್ತಿದು. ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಮಹಾಮಾರಿಯ ಸಂಕಷ್ಟದಿಂದ ಹೊರ ಬರಬೇಕಾಗಿರುವ ಸಮಯ. ಮಾಧ್ಯಮ ಮಿತ್ರರ ಆಧ್ಯತೆಯೂ ಅದೇ ಆಗಿರಲಿ ಎಂಬ ಆಶಯ ತಮ್ಮದು ಎಂದು ಅವರು ಹೇಳಿದ್ದಾರೆ.
ಸರ್ಕಾರ ಒಂದು ವರ್ಷ ಪೂರೈಸಿದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪಾಲ್ಗೊಳ್ಳದೆ ದೆಹಲಿಗೆ ತೆರಳಿದ್ದು, ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿತ್ತು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸಂಬಂಧ ಚರ್ಚಿಸಲು ವರಿಷ್ಠರು ಉಪಮುಖ್ಯಮಂತ್ರಿ ಲಕ್ಷ್ಮಣ್‌ಸವದಿ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಎಲ್ಲದ್ದಕ್ಕೂ ತೆರೆ ಎಳೆಯುವಂತೆ ಲಕ್ಷ್ಮಣಸವದಿ ಅವರು ತಮ್ಮ ದೆಹಲಿ ಭೇಟಿ ಬಗ್ಗೆ ಅನಗತ್ಯ ಹಾಗೂ ಆಧಾರರಹಿತ ವರದಿಗಳು ಬೇಡ ಎಂದು ಹೇಳುವ ಮೂಲಕ ಅಂತ್ಯ ಹಾಡುವ ಪ್ರಯತ್ನ ನಡೆಸಿದ್ದಾರೆ.