ಬಿಎಸ್‌ವೈ ನಾಯಕತ್ವ ಅಭಾದಿತ: ಅಶೋಕ್

ಬೆಂಗಳೂರು, ಸೆ. ೧೪- ಮುಖ್ಯಮಂತ್ರಿ ಯಡಿಯೂರಪ್ಪನವರೇ ನಮ್ಮ ಕ್ಯಾಪ್ಟನ್. ಮುಂದಿನ ೩ ವರ್ಷ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವೀಡ್, ವೈಡ್, ಸ್ಪೀನ್ ಬಾಲ್ ಹಾಕಿದರು ಫೋರ್, ಸಿಕ್ಸ್ ಹೊಡೆಯೋ ಧಮ್ ಯಡಿಯೂರಪ್ಪನವರಿಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ನುರಿತ ರಾಜಕಾರಣಿ ಎಂದು ಅವರು ಹೇಳಿದರು.
ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಆ ಬಗ್ಗೆ ಅವರೇ ತೀರ್ಮಾನ ಕೈಗೊಳ್ಳುತ್ತಾರೆ. ಸರ್ಕಾರ ರಚನೆಗೆ ಸಹಾಯ ಮಾಡಿದವರನ್ನು ಮಂತ್ರಿ ಮಾಡಬೇಕು ಎಂಬುದು ಮುಖ್ಯಮಂತ್ರಿಗಳ ಉದ್ದೇಶ. ಮಾತು ಕೊಟ್ಟಿದ್ದಾರೆ, ಅದರಂತೆ ನಡೆಯುತ್ತಾರೆ. ಯಾವಾಗ ವಿಸ್ತರಣೆ ಎಂಬುದನ್ನು ಮುಖ್ಯಮಂತ್ರಿಗಳೇ ತೀರ್ಮಾನಿಸುತ್ತಾರೆ ಎಂದರು. ಸಾರ್ವಜನಿಕ ಬದುಕಿನಲ್ಲಿದ್ದಾಗ ಹಲವರ ಜತೆ ಫೋಟೋ ತೆಗೆಸಿಕೊಳ್ಳಬೇಕಾಗುತ್ತದೆ. ತೆಗೆಸಿಕೊಳ್ಳದಿದ್ದರೆ ಅಹಂಕಾರ ಎಂದುಕೊಳ್ಳುತ್ತಾರೆ. ಅದರಂತೆ ನಟಿ ರಾಗಿಣಿ ಅವರು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಾಗ ತೆಗೆಸಿಕೊಂಡ ಫೋಟೋ ಇದೆ. ಹಾಗೆಯೇ ರಾಹುಲ್ ಅವರ ಜತೆ ನಾಮಕರಣ ಕಾರ್ಯಕ್ರಮದಲ್ಲಿ ತೆಗೆಸಿಕೊಂಡ ಫೋಟೋ ಇದೆ. ಅದು ಬಿಟ್ಟರೆ ನಮಗೂ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದರು.
ಶಾಸಕ ಜಮೀರ್ ಅಹಮದ್ ಖಾನ್ ಎಲ್ಲ ಕಡೆಯೂ ಇರುತ್ತಾರೆ. ಡಿಜೆ ಹಳ್ಳಿಯಲ್ಲೂ ಇರುತ್ತಾರೆ, ಕೆಜೆ ಹಳ್ಳಿಯಲ್ಲೂ ಇರುತ್ತಾರೆ, ಪಾದರಾಯನಪುರದಲ್ಲೂ ಕಾಣಿಸಿಕೊಳ್ಳುತ್ತಾರೆ. ಮುಸ್ಲಿಂ ಸಮುದಾಯದ ನಾಯಕರಾಗಬೇಕು ಎಂದು ಜಮೀರ್ ಹೊರಟ್ದಿದ್ದಾರೆ ಎಂದು ವ್ಯಂಗ್ಯವಾಡಿದರು.
ನನಗಂತೂ ಕ್ಯಾಸಿನೋ, ಇಸ್ಪೀಟ್ ಯಾವುದೂ ಗೊತ್ತಿಲ್ಲ. ಇಸ್ಪೀಟ್ ಎಲೆಯನ್ನೇ ನಾನು ಸರಿಯಾಗಿ ನೋಡಿಲ್ಲ. ಇನ್ನು ಕ್ಯಾಸಿನೋ ಎಲ್ಲಿ ನೋಡಲಿ ಎಂದು ಸಚಿವ ಆರ್. ಅಶೋಕ್ ಹೇಳಿದರು.
ಬೆಂಗಳೂರು ನಗರ ಉಸ್ತುವಾರಿಯನ್ನು ಅಶೋಕ್ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರು ನಗರದ ಉಸ್ತುವಾರಿ. ನಮ್ಮಲ್ಲಿ ಯಾವುದೇ ಪೈಪೋಟಿ ಇಲ್ಲ. ಹೀಗಾಗಿ ಅನ್ಯತಾ ಭಾವಿಸುವುದು ಬೇಡ ಎಂದರು. ನೆರೆ ಪರಿಹಾರಗಳಿಗೆ ಹೆಚ್ಚಿನ ನೆರವು ಕೋರಿ ತಾವು ಮುಖ್ಯಮಂತ್ರಿಗಳ ಜತೆ ದೆಹಲಿಗೆ ಹೋಗುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಹೆಚ್ಚಿನ ಅನುದಾನ ಕೇಳಬೇಕು ಎಂಬ ಬಗ್ಗೆ ಚರ್ಚಿಸಿದ್ದೇವೆ ಎಂದರು. ಡೀಮ್ಡ್ ಫಾರೆಸ್ಟ್ ಕಂದಾಯ ಜಮೀನಿನ ಬಗ್ಗೆ ವಿವಾದ ಇತ್ತು. ೭ ಲಕ್ಷ ಹೆಕ್ಟೇರ್ ಕಂದಾಯ ಇಲಾಖೆಗೆ, ೩.೩ ಲಕ್ಷ ಹೆಕ್ಟೇರ್ ಅರಣ್ಯ ಇಲಾಖೆಗೆ ಬಿಟ್ಟುಕೊಡುವ ತೀರ್ಮಾನವನ್ನು ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.