ಬಿಎಸ್‌ವೈ ಜೈ- ಮೋದಿ-ನಿತೀಶ್ ಸೈ

ಶಿರಾಕ್ಕೆ ಬಿಜೆಪಿ ಶಿಖರ, ಆರ್.ಆರ್. ನಗರದಲ್ಲಿ ಕಮಲ


ಬೆಂಗಳೂರು, ನ. ೧೦- ಶಿರಾ ಶಿಖರವೇರಿದ ಬಿಜೆಪಿ, ರಾಜರಾಜೇಶ್ವರಿ ನಗರದಲ್ಲಿ ಕಮಲ ಅರಳಿ ನಳನಳಿಸುವಂತಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜನಪ್ರಿಯತೆಗೆ ಮತ್ತಷ್ಟು ಮೆರುಗು ಬಂದಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯೆಂದೇ ಬಿಂಬಿತವಾಗಿದ್ದ ಶಿರಾ ಮತ್ತು ರಾಜರಾಜೇಶ್ವರಿನಗರ ಎರಡೂ ಕ್ಷೇತ್ರಗಳ ಉಪಚುನಾವಣೆಯ ಮಿನಿಸಮರದಲ್ಲಿ ಆರ್ ಆರ್ ನಗರ ಕೈವಶವಾಗಿ, ಶಿರಾ ಜೆಡಿಎಸ್ ತೆಕ್ಕೆಗೆ ಬೀಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಎರಡೂ ಕ್ಷೇತ್ರಗಳ ಮತದಾರ ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ರಾಜ್ಯದಲ್ಲಿ ಬಿಜೆಪಿ ನೆಲೆ ಮತ್ತಷ್ಟು ಗಟ್ಟಿಯಾಗುವಂತಾಗಿದೆ.
ನವೆಂಬರ್ ೩ ರಂದು ಈ ಎರಡೂ ಕ್ಷೇತ್ರಗಳಿಗೆ ಮತದಾನ ನಡೆದಿತ್ತು, ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ ನಡೆದಿದ್ದು, ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‌ಗೌಡ ಗೆಲುವು ಸಾಧಿಸಿದ್ದಾರೆ. ಹಾಗೆಯೇ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಮುನಿರತ್ನ ಅವರು ಭಾರಿ ಅಂತರದಿಂದ ಗೆಲುವು ಸಾಧಿಸಿದ್ದು, ಎರಡೂ ಕ್ಷೇತ್ರಗಳಲ್ಲೂ ವಿಜಯಲಕ್ಷ್ಮಿ ಬಿಜೆಪಿಗೆ ಒಲಿದಿದ್ದಾಳೆ,
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ೧೫ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ೧೨ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಮೆರೆದಿತ್ತು ಈಗ ನಡೆದಿರುವ ಎರಡೂ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ರಾಜ್ಯದಲ್ಲಿ ಬಿಜೆಪಿ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ.


ಮುಖ್ಯಮಂತ್ರಿ ಯಡಿಯೂರಪ್ಪನವರ ರಾಜಕೀಯ ಭವಿಷ್ಯ ಮತ್ತು ಅವರ ಆಡಳಿತವನ್ನು ಓರೆಹಚ್ಚುವ ಚುನಾವಣೆ ಎಂದೇ ಬಿಂಬಿತವಾಗಿದ್ದ ಈ ಉಪ ಸಮರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸುವ ಮೂಲಕ ಯಡಿಯೂರಪ್ಪನವರ ಸ್ಥಾನ ಮತ್ತಷ್ಟು ಭದ್ರವಾಗಿದೆ. ಪಕ್ಷದಲ್ಲಿ ಅವರ ವಿರುದ್ಧದ ಅಪಸ್ವರಗಳಿಗೆ ತೆರೆ ಎಳೆದಂತಾಗಿದೆ.
ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಎದಿರಾದ ಉಪ-ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದ ಶಿವಕುಮಾರ್ ಶತಾಯ-ಗತಾಯ ಮೇಲುಗೈ ಸಾಧಿಸಲು ನಾನಾ ಕಾರ್ಯತಂತ್ರ ರೂಪಿಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದರು. ಆದರೆ, ಡಿ.ಕೆ.ಶಿ. ಯತ್ನ ಹೊಳೆಯಲ್ಲಿ ಹುಣೆಸೆ ಹಣ್ಣು ಹಿಂಡಿದಂತಾಗಿದೆ.
ಶಿರಾ ಕ್ಷೇತ್ರ ಜೆಡಿಎಸ್‌ನ ಭದ್ರ ಕೋಟೆಯೆಂದೆ ಹೇಳಲಾಗಿತ್ತು. ಆದರೆ ಉಪಚುನಾವಣೆಯಲ್ಲಿ
ಶಿರಾ ಮತದಾರರು ಅಪ್ಪ-ಮಕ್ಕಳ ಪಕ್ಷವೆಂದೇ ಬಿಂಬಿತವಾಗಿರುವ ಜೆಡಿಎಸ್‌ಗೆ ಸೂಕ್ತ ಬುದ್ಧಿ ಕಲಿಸಿ ಕಮಲ ಹಿಡಿದಿರುವುದು ಜೆಡಿಎಸ್ ತೀವ್ರ ಮುಖಭಂಗ ಅನುಭವಿಸುವಂತಾಗಿದೆ. .
ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಗಿಯುವವರೆಗೂ ಮೊಕ್ಕಾಂ ಹೂಡಿ ಕೆಆರ್ ಪೇಟೆ ಚುನಾವಣೆ ಮಾದರಿಯಲ್ಲೇ ಶಿರಾದಲ್ಲೂ ಕಮಲ ಅರಳಿಸುವ ಸಂಕಲ್ಪ ತೊಟ್ಟು ಅದರಂತೆ ಕಾರ್ಯತಂತ್ರ ರೂಪಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರಿಗೆ ಈ ಗೆಲುವು ರಾಜಕೀಯವಾಗಿ ಮತ್ತಷ್ಟು ಬಲ ತಂದಿದೆ. ಚುನಾವಣಾ ತಂತ್ರಗಳನ್ನು ರೂಪಿಸುವಲ್ಲಿ ಬಿ.ವೈ. ವಿಜಯೇಂದ್ರ ಸಿದ್ಧಹಸ್ತರು ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.
ಶಿರಾದಲ್ಲಿ ಹಣಾಹಣಿ-ರಾಜರಾಜೇದ್ವರಿ ನಗರದಲ್ಲಿ ಸುಲಭ ಗೆಲುವು
ಎರಡೂ ಕ್ಷೇತ್ರಗಳ ಮತ ಎಣಿಕೆಯಲ್ಲಿ ಆರಂಭದ ಸುತ್ತಿನಿಂದಲೇ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರು. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಂತೂ ಆರಂಭದಿಂದಲೇ ಮುನ್ನಡೆ ಹೊಂದಿದ್ದ ಬಿಜೆಪಿಯ ಮುನಿರತ್ನ ಪ್ರತಿ ಸುತ್ತಿನಲ್ಲೂ ಮುನ್ನಡೆಯನ್ನು ವಿಸ್ತರಿಸಿಕೊಂಡು ಭಾರಿ ಅಂತರದಿಂದಕಾಂಗ್ರಸ್ ಅಭ್ಯರ್ಥಿ ಕುಸುಮಾರವರನ್ನು ಪರಾಭವಗೊಳಿಸಿ ವಿಜಯಶಾಲಿಯಾಗಿದ್ದಾರೆ. ಇಲ್ಲಿ ಜೆಡಿಎಸ್‌ನ ಅಭ್ಯರ್ಥಿ ಕೃಷ್ಣಮೂರ್ತೀ ಅವರೆಗೆ ಠೇವಣಿ ನಷ್ಟವಾಗಿ ಜೆಡಿಎಸ್ ಮುಖಭಂಗಕ್ಕೆ ಒಳಗಾಗಿದೆ.
ಕಾಂಗ್ರೆಸ್‌ನ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ ಸುರೇಶ್‌ಗೆ ಈ ಫಲಿತಾಂಶಗಳು ರಾಜಕೀಯವಾಗಿ ಹಿನ್ನಡೆಯಾದಂತಾಗಿದೆ.
ಶಿರಾದಲ್ಲಿ ದಿವಂಗತ ಶಾಸಕ ಸತ್ಯನಾರಾಯಣ ಅವರ ಅನುಕಂಪದ ಅಲೆಯಲ್ಲಿ ಅವರ ಪತ್ನಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ತಲೆಕೆಳಗಾಗಿ ಬಿಜೆಪಿಯ ಡಾ. ರಾಜೇಶ್‌ಗೌಡ ಜಯಭೇರಿ ಬಾರಿಸಿದ್ದಾರೆ. ಇಲ್ಲಿ ಕಾಂಗ್ರೆಸ್‌ನ ಟಿ.ಬಿ ಜಯಚಂದ್ರ ೨ನೇ ಸ್ಥಾನದಲ್ಲಿದ್ದರೆ, ಜೆಡಿಎಸ್ ೩ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಶಿರಾ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭದಿಂದಲೂ ಕಾಂಗ್ರೆಸ್‌ನ ಡಾ. ರಾಜೇಶ್‌ಗೌಡ ಮತ್ತು ಕಾಂಗ್ರೆಸ್‌ನ ಟಿ.ಬಿ ಜಯಚಂದ್ರ ನಡುವೆ ಹಣಾಹಣಿಯ ಹೋರಾಟವೇ ನಡೆದಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದು ಕುತೂಹಲ ಮೂಡಿಸಿತ್ತು, ಕೊನೆಗೆ ಡಾ. ರಾಜೇಶ್‌ಗೌಡ ಜಯಗಳಿಸಿದರು.
ಆರಂಭದಲ್ಲಿ ಕೆಲವೇ ಸಾವಿರ ಮತಗಳ ಅಂತರದಿಂದ ಮುಂದಿದ್ದ ಡಾ.ರಾಜೇಶ್‌ಗೌಡ ನಂತರ ಅಂತರವನ್ನು ಹೆಚ್ಚಿಸಿಕೊಂಡರು. ಒಂದು ಹಂತದಲ್ಲಿ ಜಯ ಕಾಂಗ್ರೆಸ್‌ಗೆ ಒಲಿಯುವ ಸ್ಥಿತಿಯು ಕಾಣುತ್ತಿತ್ತು, ಆದರೂ ಕೊನೆಗೆ ಡಾ. ರಾಜೇಶ್‌ಗೌಡ ಅಂತರವನ್ನು ಹೆಚ್ಚಿಸಿಕೊಂಡು ಬೀಗಿದರು.

ಅಭ್ಯರ್ಥಿಗಳು ಪಡೆದಿರುವ ಮತಗಳ ವಿವರ

ಬಿಜೆಪಿಯ ರಾಜೇಶ್‌ಗೌಡ 74,522 ಮತಗಳು
ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ 61572 ಮತಗಳು
ಜೆಡಿಎಸ್‌ನ ಅಮ್ಮಾಜಮ್ಮ 35982 ಮತಗಳನ್ನು ಪಡೆದಿದ್ದಾರೆ.

ಆರ್‌.ಆರ್.ನಗರ: ಮುನಿರತ್ನ ಭರ್ಜರಿ ಗೆಲುವು
ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 57,936 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಿಂದ ಎರಡು ಬಾರಿ ಗೆಲುವು ಸಾಧಿಸಿದ್ದ ಮುನಿರತ್ನ ಅವರು ಈ ಬಾರಿ ಬಿಜೆಪಿ ಸೇರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಮುನಿರತ್ನ ಅವರು ಅಂತಿಮವಾಗಿ 57,936 ಮತಗಳ ಅಂತರದಿಂದ ವಿಜಯತ ಪತಾಕೆ ಹಾರಿಸಿದ್ದಾರೆ.
ಬಿಜೆಪಿಯ ಮುನಿರತ್ನ ಅವರು ಒಟ್ಟು 1,25,734 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರು 67993 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‌ನ ಕೃಷ್ಣಮೂರ್ತಿ 10251 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್‌ನ ಅಬ್ಬರದ ಪ್ರಚಾರ, ಆರೋಪ– ಪ್ರತ್ಯಾರೋಪ, ಜಾತಿ– ಕಣ್ಣೀರ ರಾಜಕಾರಣದ ಕಾರಣದಿಂದ ರಾಜರಾಜೇಶ್ವರಿ ನಗರದ ಉಪ ಚುನಾವಣೆ ಭಾರೀ ಕುತೂಹಲ ಕೆರಳಿಸಿತ್ತು. ಅಲ್ಲದೆ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮದ್ಯೆ ಜಿದ್ದಾಜಿದ್ದಿನ ಪೈಪೋಟಿ ನಡೆಯಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಮತದಾರ ಬಿಜೆಪಿ ‘ಕೈ’ ಹಿಡಿಯುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಮುಖಭಂಗ ಉಂಟಾಗಿದೆ.

ಅಭ್ಯರ್ಥಿಗಳು ಪಡೆದಿರುವ ಮತಗಳ ವಿವರ
ಬಿಜೆಪಿಯ ಮುನಿರತ್ನ – 1,25,734 ಮತಗಳು
ಕಾಂಗ್ರೆಸ್‌ನ ಕುಸುಮಾ ಹೆಚ್. – 67,798 ಮತಗಳು
ಜೆಡಿಎಸ್‌ನ ಕೃಷ್ಣಮೂರ್ತಿ – 10251 ಮತಗಳು
ನೋಟಾ – 2494

ಎನ್ ಡಿ ಎ ಕೊರಳಿಗೆ ಬಿಹಾರ


ಪಾಟ್ನಾ,ನ.೧೦- ಬಿಹಾರದಲ್ಲಿ ನಾಲ್ಕನೇ ಬಾರಿಗೆ ಜೆಡಿಯು – ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರ ಸೂತ್ರ ಹಿಡಿಯುವುದು ನಿಚ್ಚಳವಾಗಿದೆ. ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಬಿಹಾರದ ಮತದಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೋಡಿಗೆ ಮತ್ತೊಮ್ಮೆ ಆಡಳಿತ ನಡೆಸುವ ಅವಕಾಶ ಒದಗಿಸಿದ್ದಾರೆ.
ಇಂದು ಬೆಳಿಗ್ಗೆ ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ, ಗಳಿಗೆ – ಗಳಿಗೆಗೂ ಫಲಿತಾಂಶ ಏರುಪೇರಾಗುತ್ತಾ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿತ್ತು.
ಒಮ್ಮೆ ಎನ್ ಡಿ ಎ ಸ್ಪಷ್ಟ ಬಹುಮತ ಗಳಿಸಿದರೆ, ಮರು ಕ್ಷಣವೇ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಗಳೂ ಗೋಚರಿಸಿದವು. ಹೀಗಾಗಿ ಮಧ್ಯಾಹ್ನದವರೆಗೆ ಬಿಹಾರದ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿತು.


ಮತದಾನೋತ್ತರ ಸಮೀಕ್ಷೆಗಳನ್ನು ಹುಸಿಗೊಳಿಸಿ ಮತದಾರ ಎನ್ ಡಿಎ ಮೈತ್ರಿಕೂಟಕ್ಕೆ ಗೆಲುವಿನ ಮಾಲೆ ತೊಡಿಸಿದ್ದಾರೆ.
ಚುನಾವಣಾ ಪ್ರಚಾರ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಡಿ ಎನ್ನುವ ಮನವಿಗೆ ನಿರೀಕ್ಷೆಗೂ ಮೀರಿ ಜನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಜೆಡಿಯುಗಿಂತ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.
ಎನ್ ಡಿ ಎ ಕೂಟ ನಾಲ್ಕನೇ ಬಾರಿಗೆ ಅಧಿಕಾರ ಚುಕ್ಕಾಣಿಗೆ ಅವಕಾಶ ನೀಡಬಾರದು ಎನ್ನುವ ಮಹಾಘಟಬಂಧನ್ ಮಾಡಿದ ಎಲ್ಲಾ ಲೆಕ್ಕಾಚಾರಗಳು ನಿತೀಶ್ ಕುಮಾರ್ ಬಿಟ್ಟ ಬಾಣದ ಮುಂದೆ ಎಲ್ಲಾ ಉಲ್ಟಾ ಹೊಡೆದಿದೆ. ಹೀಗಾಗಿ ಬಿಹಾರದಲ್ಲಿ ಮತ್ತೊಮ್ಮೆ ಬಿಜೆಪಿ-ಜೆಡಿಯು ಅಧಿಕಾರ ಸೂತ್ರ ಹಿಡಿಯಲು ಸಜ್ಜಾಗಿವೆ
ಬಿಹಾರದ ಜನತೆಗೆ ಆರ್ ಜೆಡಿ ಯುವನಾಯಕ ತೇಜಸ್ವಿ ಯಾದವ್ ನೇತೃತ್ವದ ಲಾಟೀನು ಬೆಳಕಾಗಲಿದೆ ಎನ್ನುವ ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ. ಲಾಟೀನಿನ ಬೆಳಕಿನಲ್ಲಿ ತಾನು ಬೆಳಗಲು ಮುಂದಾಗಿದ್ದ ಕಾಂಗ್ರೆಸ್ ಮತ್ತೊಮ್ಮೆ ಕೈ ಸುಟ್ಟುಕೊಂಡಿದೆ.

೨೪೩ ವಿಧಾನಸಭೆಯ ಸಂಖ್ಯಾಬಲದಲ್ಲಿ ಅಧಿಕಾರ ಹಿಡಿಯಲು ೧೨೨ ಮ್ಯಾಜಿಕ್ ಸಂಖ್ಯೆಯ ಅಗತ್ಯವಿದೆ. ಎನ್ ಡಿಎ ಮೈತ್ರಿಕೂಟ ೧೩೨ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಹಾಘಟಬಂಧನ್ ೧೦೦ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಜನರಿಗೆ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಬಿಜೆಪಿ ಮೈತ್ರಿಕೂಟ ಪ್ರಕಟಿಸಿತ್ತು. ಇದಕ್ಕೆ ಪ್ರತಿಯಾಗಿ ಆರ್ ಜೆ ಡಿ ಮೈತ್ರಿಕೂಟ ಯುವಜನರಿಗೆ ಉದ್ಯೋಗ ದೊರಕಿಸುವುತೂ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಪ್ರಕಟಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು.
ಚುನಾವಣೆಯಲ್ಲಿ ನೀಡಿದ್ದ ಭರವಸೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಬಿಹಾರದ ಮತದಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಮೋಡಿಗೆ ಒಗಾಗಿ ಮತ ಚಲಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಅವರು ಈಗಲೂ ನಾವೇ ಅಧಿಕಾರಕ್ಕೆ ಬರಲಿದ್ದೇವೆ ಎನ್ನುವ ವಿಶ್ವಾಸವಿದೆ. ಸಂಪೂರ್ಣ ಫಲಿತಾಂಶ ಬರುವವರೆಗೂ ಕಾದು ನೋಡುತ್ತೇವೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರತಿಕ್ರಿಯಿಸಿ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಜನರು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಉಳಿಸಿಕೊಂಡು ಹೋಗುವುದಾಗಿ ಅವರು ಭರವಸೆ ನೀಡಿದ್ದಾರೆ.

ಕೊರೊನಾ ಸೋಂಕು ಸೋಲಿಸಿದ್ದೇವೆ
ಆರ್ ಜೆಡಿ ಅಥವಾ ತೇಜಸ್ವಿ ಯಾದವ್ ಎನ್ನುವ ಕೊರೊನಾ ಸೋಂಕನ್ನು ನಾವು ಪರಾಭವಗೊಳಿಸಿದ್ದೇವೆ ಎಂದು ಜೆಡಿಯು ವಕ್ತಾರ ಕೆ.ಸಿ ತ್ಯಾಗಿ ಹೇಳಿದ್ದಾರೆ.
ಎಲ್ ಜೆಪಿಯ ಚಿರಾಗ್ ಪಾಸ್ವಾನ್ ಅವರು ಮತ ಒಡೆಯುವ ಕೆಲಸ ಮಾಡಿದ್ದರೂ, ಬಿಹಾರದ ಜನತೆ ಅವರಿಗೆ ಪಾಠ ಕಲಿಸಿದ್ದಾರೆ ಎಂದು ಹೇಳಿದರು.


ಗೆಲುವಿನ ವಿಶ್ವಾಸ
ಮತ ಎಣಿಕೆಯಲ್ಲಿ ಹಾವು – ಏಣಿ ಆಟ ಮುಂದುವರೆದಿದ್ದರೂ ಆರ್ ಜೆಡಿ ನೇತೃತ್ವದ ಮಹಾಘಟ ಬಂಧನ್ ಗೆಲುವು ಸಾಧಿಸಲಿದೆ ಎಂದು ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
ತಾವು ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲೇ ೧೦ ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಅವರು ತಿಳಿಸಿದ್ದರು.