ಬಿಎಸ್‌ವೈ ಕೆಳಗಿಳಿಸಲು ಬಿಜೆಪಿ ನಾಯಕರ ಹುನ್ನಾರ: ಪರಂ

ತುಮಕೂರು/ಸಿರಾ, ಅ. ೩೧- ಮದಲೂರು ಕೆರೆಗೆ ನೀರು ಹರಿಸಿ ನಾನೇ ಬಂದು ಪೂಜೆ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಿಜೆಪಿ ಪಕ್ಷದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ. ಬಿಜೆಪಿಯವರೇ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಹೊರಟಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಗೇಲಿ ಮಾಡಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಹಿರಿಯರು, ಅವರ ಬಗ್ಗೆ ನನಗೆ ಗೌರವ ಇದೆ. ಆದರೆ ಮದಲೂರು ಕೆರೆ ಯೋಜನೆ ಹೊಸದೇನಲ್ಲ, ಈಗಾಗಲೇ ಟಿ.ಬಿ. ಜಯಚಂದ್ರ ಅವರು ನೀರು ಹರಿಸಿದ್ದಾರೆ. ಯಡಿಯೂರಪ್ಪನವರು ಬಂದು ಹೊಸದಾಗಿ ಮಾಡುವಂತಹದ್ದೇನಿಲ್ಲ. ಹೇಮಾವತಿ ಜಲಾಶಯದಿಂದ ನೀರು ಬಿಟ್ಟರೆ ಮದಲೂರು ಕೆರೆಗೆ ನೀರು ಹರಿಯುತ್ತದೆ ಎಂದರು.
ಸಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿರಾ ಭಾಗದಲ್ಲಿ ಕುಡಿಯಲು ನೀರು ಇಲ್ಲ ಎಂಬ ಕಾರಣಕ್ಕೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದರು. ಎಲ್ಲಿ ನೋಡಿದರೂ ಒಣ ಪ್ರದೇಶವಾಗಿತ್ತು. ಕಳ್ಳಂಬೆಳ್ಳ ಕೆರೆಗೆ ನೀರು ಹರಿಸಿ ಜಯಚಂದ್ರ ಅವರು ಸಿರಾಗೆ ಕೊಡುಗೆ ನೀಡಿದ್ದಾರೆ. ಇದನ್ನೆಲ್ಲಾ ಕ್ಷೇತ್ರದ ಜನತೆ ಮರೆಯುವುದಿಲ್ಲ ಎಂದು ಅವರು ಹೇಳಿದರು.
ಸಿರಾ ಕ್ಷೇತ್ರದ ಜನತೆ ಮತ್ತೆ ಜಯಚಂದ್ರ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಇಡೀ ರಾಜ್ಯಕ್ಕೆ ಹೊಸದೊಂದು ಸಂದೇಶ ಕೊಡಬೇಕು ಎಂದು ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಬಿಜೆಪಿ ಅವಧಿಯಲ್ಲಿ ಸಿರಾ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆಯಾದರೂ ಏನು ಎಂದು ಅವರು ಪ್ರಶ್ನಿಸಿದರು.
ತುಮಕೂರು ಜಿಲ್ಲೆಗೆ ನೀರಾವರಿ ಅವಶ್ಯಕತೆ ಇದೆ ಎಂಬುದನ್ನು ಅರಿತು ಹೇಮಾವತಿ ನದಿ ನೀರು ತುಮಕೂರಿಗೆ ಹರಿಸಲು ಚಿಂತನೆ ನಡೆಸಿದ್ದು ಕಾಂಗ್ರೆಸ್, ಕಾರ್ಯ ರೂಪಕ್ಕೆ ತಂದಿದ್ದೂ ಕಾಂಗ್ರೆಸ್ ಪಕ್ಷ ಎಂದರು.
ತುಮಕೂರಿಗೆ ಎಚ್‌ಎಂಟಿ ಘಟಕ ತಂದಿದ್ದು, ತುಮಕೂರು ವಿಶ್ವವಿದ್ಯಾಲಯ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಇಡೀ ಏಷ್ಯಾ ಖಂಡದಲ್ಲಿ ಎರಡನೇ ಅತಿದೊಡ್ಡ ಇಂಡಸ್ಟ್ರೀಯಲ್ ಹಬ್, ಎಚ್.ಎ.ಎಲ್. ಘಟಕದ ಚಿಂತನೆ, ಅಪ್ಪರ್ ಭದ್ರಾ ಯೋಜನೆಗೆ ಹಣ ಎಲ್ಲವೂ ಕಾಂಗ್ರೆಸ್ ಸರ್ಕಾರ ಮಾಡಿರುವುದು ಎಂದು ಅವರು ಹೇಳಿದರು.
ಕುಣ್ಮುಚ್ಚಿ ಕುಳಿತ ಚುನಾವಣಾ ಆಯೋಗ ಸಿರಾ ಕ್ಷೇತ್ರದಲ್ಲಿ ಹಣ, ಹೆಂಡ ಹಂಚುತ್ತಿದ್ದರೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ ಎಂದು ಅವರು ಆರೋಪಿಸಿದರು.
ಚುನಾವಣಾ ಆಯೋಗ ಯಾವುದೇ ಪಕ್ಷದ ಪರವಾಗಿ ಇರಬಾರದು. ಇನ್ನು ೪೮ ಗಂಟೆಗಳು ಬಾಕಿ ಇರುವಾಗ ಹೊರಗಿನಿಂದ ಬಂದವರನ್ನು ಕ್ಷೇತ್ರದಿಂದ ಆಚೆ ಹಾಕಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ, ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ, ಅಭ್ಯರ್ಥಿ ಟಿ.ಬಿ. ಜಯಚಂದ್ರ, ವೇಣುಗೋಪಾಲ್, ಶಾಸಕ ವೆಂಕಟರಮಣಪ್ಪ ಮತ್ತಿತರರು ಉಪಸ್ಥಿತರಿದ್ದರು.