ಬಿಎಸ್‌ವೈ – ಈಶ ಮುನಿಸಿನ ಗಾಯಕ್ಕೆ ಅರುಣ್ ಮುಲಾಮು

ಬೆಂಗಳೂರು, ಏ. ೭- ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ, ಅಸಮಾಧಾನ, ಅತೃಪ್ತಿಗಳನ್ನು ಶಮನಗೊಳಿಸಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ, ಕೆಲ ಸಚಿವರು ಹಾಗೂ ಪಕ್ಷದ ಮುಖಂಡರೊಡನೆ ಸಮಾಲೋಚನೆ ನಡೆಸಲಿದ್ದಾರೆ.
ರಾಜ್ಯದ ಉಪಚುನಾವಣೆಯ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲು ಅರುಣ್‌ಸಿಂಗ್ ದೆಹಲಿಯಿಂದ ನಾಳೆ ರಾಜ್ಯಕ್ಕೆ ಆಗಮಿಸಲಿದ್ದು, ಮೂರು ದಿನಗಳ ಕಾಲ ರಾಜ್ಯದಲ್ಲೇ ವಾಸ್ತವ್ಯ ಹೂಡಿ, ಬೆಳಗಾವಿ ಲೋಕಸಭಾ , ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುವರು.
ಉಪಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳಲು ಅರುಣ್‌ಸಿಂಗ್ ರಾಜ್ಯಕ್ಕೆ ಬರುತ್ತಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಈಶ್ವರಪ್ಪ ನಡುವಿನ ಮುನಿಸನ್ನು ಶಮನಗೊಳಿಸಿ ಇವರಿಬ್ಬರ ನಡುವಿನ ರಾಜಕೀಯ ಬಿಕ್ಕಟ್ಟನ್ನು ಪರಿಹರಿಸಲು ಅರುಣ್‌ಸಿಂಗ್ ಸಮಾಲೋಚನೆ ನಡೆಸಲಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ತಮ್ಮ ಗಮನಕ್ಕೆ ತಾರದೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಚಿವ ಈಶ್ವರಪ್ಪ ರಾಜ್ಯಪಾಲರು ಹಾಗೂ ಪಕ್ಷದ ವರಿಷ್ಠರಿಗೆ ಲಿಖಿತ ದೂರು ನೀಡಿದ್ದರು.
ಈಶ್ವರಪ್ಪನವರ ಈ ನಡೆ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ನಾನಾ ಬೆಳವಣಿಗೆಗಳಿಗೆ ಕಾರಣವಾಗಿ ಈಶ್ವರಪ್ಪನವರ ನಡೆ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ ಬಣದ ಸಚಿವರು, ಶಾಸಕರು ಈಶ್ವರಪ್ಪನವರ ದೂರಿನ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಮೂಲ ಬಿಜೆಪಿಗರು ಮೌನವಾಗಿಯೇ ಈಶ್ವರಪ್ಪನವರ ಹಿಂದೆ ನಿಂತು ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಇದು ಬಿಜೆಪಿಯಲ್ಲಿ ಇರುವ ಅಸಮಾಧಾನ, ಅತೃಪ್ತಿಗಳನ್ನು ಜಗಜ್ಜಾಹೀರು ಮಾಡಿತ್ತು.
ಈ ಬೆಳವಣಿಗೆಯಿಂದ ಬಿಜೆಪಿ ವರಿಷ್ಠರು ಮುಜುಗರಕ್ಕೆ ಒಳಗಾಗಿದ್ದರು. ಹಾಗಾಗಿ ಈ ಬಿಕ್ಕಟ್ಟನ್ನು ಪರಿಹರಿಸಲು ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಅರುಣ್‌ಸಿಂಗ್ ಅವರಿಗೆ ಸೂಚನೆ ನೀಡಿದ್ದು, ಅದರಂತೆ ಅರುಣ್‌ಸಿಂಗ್ ನಾಳೆ ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಈಶ್ವರಪ್ಪ ಸೇರಿದಂತೆ ಹ ಲವು ಸಚಿವರು, ಶಾಸಕರ ಜತೆ ಚರ್ಚಿಸಿ, ಎಲ್ಲವನ್ನು ಶಮನಗೊಳಿಸುವರು ಎಂದು ಹೇಳಲಾಗಿದೆ.
ನಾಳೆ ಮಧ್ಯಾಹ್ನ ೧.೩೦ ಕ್ಕೆ ಬೆಂಗಳೂರಿಗೆ ಆಗಮಿಸುವ ಅರುಣ್‌ಸಿಂಗ್ ಅವರು ವಿಮಾನ ನಿಲ್ದಾಣದಲ್ಲೇ ಒಂದು ಗಂಟೆಗಳ ಕಾಲ ಪಕ್ಷದ ಮುಖಂಡರೊಡನೆ ಚರ್ಚೆ ನಡೆಸಿ ಮಧ್ಯಾಹ್ನ ೩ ಗಂಟೆಗೆ ಮಂಗಳೂರಿಗೆ ವಿಮಾನ ಮೂಲಕ ಪ್ರಯಾಣ ಬೆಳೆಸಿ ಅಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮನೆಗೆ ಭೇಟಿ ಅವರ ಜತೆ ಚರ್ಚಿಸಿ ಕೆಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಡು ನಾಳೆ ರಾತ್ರಿ ಮಂಗಳೂರಿನಲ್ಲೇ ವಾಸ್ತವ್ಯ ಹೂಡುವರು.
ಶುಕ್ರವಾರ ಬೆಳಗ್ಗೆ ಮಂಗಳೂರಿನಿಂದ ವಿಮಾನದ ಮೂಲಕ ಬೆಳಗಾವಿಗೆ ಪ್ರಯಾಣ ಬೆಳೆಸುವ ಆರುಣ್‌ಸಿಂಗ್ ರವರು ಶುಕ್ರವಾರ ಬೆಳಗಾವಿ ಲೋಕಸಭಾ ಉಪಚುನಾವಣೆಯ ಹಲವು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿಪರ ಪ್ರಚಾರ ನಡೆಸುವರು.
ಮಂಗಳೂರಿನಿಂದ ಸಂಜೆ ರಾಯಚೂರಿನ ಸಿಂಗದೂರಿಗೆ ಆಗಮಿಸಿ ಶುಕ್ರವಾರ ಸಿಂಧನೂರಿನಲ್ಲೇ ವಾಸ್ತವ್ಯ ಹೂಡಿ ಶನಿವಾರ ಬೆಳಗ್ಗಿನಿಂದ ಸಂಜೆವರೆಗೂ ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪ್ರಚಾರ ಱ್ಯಾಲಿಗಳಲ್ಲಿ ಪಾಲ್ಗೊಳ್ಳುವರು. ಶನಿವಾರ ಮಸ್ಕಿಯಲ್ಲೇ ವಾಸ್ತವ್ಯ ಹೂಡುವರು.
ಭಾನುವಾರ ಬೆಳಗ್ಗೆ ಬೀದರ್‌ಗೆ ಆಗಮಿಸಿ ಅಲ್ಲಿಂದ ಬಸವಕಲ್ಯಾಣ ಕ್ಷೇತ್ರಕ್ಕೆ ತೆರಳಿ ಅಲ್ಲಿ ಚುನಾವಣಾ ಪ್ರಚಾರಗಳಲ್ಲಿ ಪಾಲ್ಗೊಂಡು ಸಂಜೆ ಹೈದರಾಬಾದ್‌ಗೆ ತೆರಳಿ ಅಲ್ಲಿಂದ ದೆಹಲಿಗೆ ವಾಪಸ್ಸಾಗುವರು.