ಬಿಎಸ್‌ವೈ ಅಭಿವೃದ್ಧಿ ಕಾರ್ಯ ಅಭ್ಯರ್ಥಿ ಗೆಲುವಿಗೆ ದಾರಿ

ಲಿಂಗಸೂಗೂರು.ಮಾ.೨೧-ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತ್ರತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ಮುನ್ನುಡಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್.ಯಡಿಯೂರಪ್ಪ ನೇತ್ರತ್ವದ ಸರ್ಕಾರ ಇಡೀ ರಾಜ್ಯದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್ ನೇತ್ರತ್ವದ ಬಿಜೆಪಿ ಪಕ್ಷ ಭೂತ್ ಮಟ್ಟದಿಂದ ಸಂಘಟನೆಯಾಗುತ್ತಿದೆ ಇಂತಹ ಸಂದರ್ಭದಲ್ಲಿ ಉಪ ಚುನಾವಣೆಗಳು ಬಂದಿವೆ ಈಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಳೆದ ಮೂರು ವರ್ಷಗಳಿಂದ ಬರಗಾಲ ಪೀಡಿತವಾಗಿದ್ದ ತಾಲೂಕಿಗೆ ೫೦ ಲಕ್ಷ ರೂ. ಎರಡು ವರ್ಷದಿಂದ ಬರಗಾಲ ಪೀಡಿತ ತಾಲೂಕಿಗೆ ೩೫ ಲಕ್ಷ ರೂ. ಒಂದು ವರ್ಷ ಬರಗಾಲ ಪೀಡತ ತಾಲೂಕಿಗೆ ೨೦ ಲಕ್ಷ ರೂಪಾಯಿಗಳನ್ನು ಆಯಾ ಟಾಸ್ಕಪೋರ್ಸ ಸಮಿತಿಗೆ ಬಿಡುಗಡೆಗೊಳಿಸಲಾಗಿದೆ. ನೀರಿನ ಮೂಲ ಇಲ್ಲದ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಕುಡಿವ ನೀರು ಪೂರೈಕೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆರ್‌ಓ ಪ್ಲಾಂಟ್‌ಗಳು ಸಮಸ್ಯೆಯಲ್ಲಿವೆ ಈ ಬಗ್ಗೆ ಸದನ ಸಮಿತಿಗೆ ವಹಿಸಲಾಗಿದೆ. ಸಮಿತಿ ವರದಿ ನೀಡಿದ ನಂತರ ಕ್ರಮಕೈಗೊಳ್ಳಲಾಗುವುದು ಎಂದರು.
ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್, ಜಿ.ಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ತಾಲೂಕು ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ಡಾ.ಶಿವಬಸಪ್ಪ, ಗಿರಿಮಲ್ಲನಗೌಡ, ಶಂಕರಗೌಡ ಬಳಗಾನೂರು, ಅಯ್ಯಪ್ಪ ವಕೀಲರು, ಪರಮೇಶ ಯಾದವ್ ಹಾಗೂ ಇನ್ನಿತರಿದ್ದರು.