ಬಿಎಸ್‌ವೈ ರಾಜ್ಯ ಕಂಡ ವಿಶೇಷ ರಾಜಕಾರಣಿ;ಎಂಬಿಪಾ

ಬೆಂಗಳೂರು, ಜು. ೨೩- ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯ ಕಂಡ ವಿಶೇಷ ರಾಜಕಾರಣಿ ಎಂದು ಬಣ್ಣಿಸಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಪಕ್ಷ ಅವರಿಗೆ ಪೂರ್ಣಾವಧಿ ಅಧಿಕಾರ ನೀಡಬೇಕಿತ್ತು ಎಂದಿದ್ದಾರೆ.
ನಿನ್ನೆಯಷ್ಟೆ ತಮ್ಮ ತವರು ಕ್ಷೇತ್ರ ಶಿಕಾರಿಪುರದಲ್ಲಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ ಈ ಕ್ಷೇತ್ರವನ್ನು ತಮ್ಮ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಬಿಟ್ಟುಕೊಡುವುದಾಗಿ ಹೇಳಿಕೆ ನೀಡಿದ್ದ ಬೆನ್ನಲ್ಲೆ ಎಂ.ಬಿ ಪಾಟೀಲ್ ಅವರಿಂದ ಈ ಪ್ರತಿಕ್ರಿಯೆ ಹೊರ ಬಿದ್ದಿದೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪರವರು ರಾಜ್ಯದಲ್ಲಿ ಹೋರಾಟ ಮಾಡುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಯಡಿಯೂರಪ್ಪರವರನ್ನು ಮೂಲೆ ಗುಂಪು ಮಾಡಲಾಗಿದೆ ಎಂದು ಹೇಳಿದರು.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತರಲು ಬಿಎಸ್‌ವೈ ಪ್ರಮುಖಪಾತ್ರ ವಹಿಸಿದ್ದಾರೆ. ಆದರೆ, ಅವರಿಗೆ ಅಧಿಕಾರ ನಡೆಸಲು ಪೂರ್ಣಾವಧಿ ಅವಕಾಶ ನೀಡಬೇಕಾಗಿತ್ತು ಎಂದರು.
ಯಡಿಯೂರಪ್ಪರವರು ಕೆಳಮಟ್ಟದಿಂದ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದ್ದಾರೆ. ಹೀಗಾಗಿ ಅವರು ರಾಜ್ಯಕಂಡ ವಿಶೇಷ ರಾಜಕಾರಣಿ ಮತ್ತು ಪಕ್ಷದಲ್ಲಿ ಸಾಮೂಹಿಕ ನಾಯಕರಾಗಿ ಎಲ್ಲ ಸಮುದಾಯಗಳು ಈಗ ಯಡಿಯೂರಪ್ಪರವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಿಳಿಸಿದರು.
ಪಕ್ಷವನ್ನು ಅಧಿಕಾರಕ್ಕೆ ತಂದ ಬಳಿಕ ಬಿಎಸ್‌ವೈರನ್ನು ಪಕ್ಷ ಮೂಲೆಗುಂಪು ಮಾಡಿದೆ. ಈ ಧೋರಣೆಯಿಂದಾಗಿಯೇ ಭ್ರಮನಿರಸನಗೊಂಡಿದ್ದಾರೆ ಎಂದು ಪಾಟೀಲ್ ಹೇಳಿದರು.