ಬಿಎಸ್‍ವೈ ಮನೆ ಮೇಲೆ ಕಲ್ಲು ತೂರಾಟ ರಾಜಕೀಯ ಪ್ರೇರಿತ

ಹುಬ್ಬಳ್ಳಿ, ಮಾ 28: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮನೆಯ ಮೇಲಿನ ಕಲ್ಲು ತೂರಾಟ ರಾಜಕೀಯ ಪ್ರೇರಿತ ದಾಳಿಯಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಬಂಜಾರ ಸಮೂದಾಯದ ಪ್ರತಿಭಟನೆ ವೇಳೆಯಲ್ಲಿ ಮನೆಯ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕಲ್ಲು ತೂರಿದವರು ನಿಜವಾದ ಮೀಸಲಾತಿ ಬಗ್ಗೆ ಕಳಕಳಿ ಇದ್ದವರಲ್ಲ. ಎಡಗೈ ಮತ್ತು ಬಲಗೈ ಬೇಡಿಕೆಯಂತೆ ಒಳಮೀಸಲಾತಿ ಕೊಟ್ಟಿದ್ದೇವೆ. ನಮ್ಮ ಸರ್ಕಾರ ಜಾಣತನದ ನಡೆ ಅನುಸರಿಸಿದೆ ಎಂದರು.
ಜನರ ಅಪೇಕ್ಷೆಗೆ ತಕ್ಕಂತೆ ಚುನಾವಣೆಗೆ ಕೊಟ್ಟಿದ್ದೇವೆ. ಲಿಂಗಾಯಿತ ಸಮುದಾಯಕ್ಕೂ ಹೆಚ್ಚು ಮೀಸಲಾತಿ ಕೊಟ್ಟಿದೆ. ನಿಜವಾದ ಹೋರಾಟ ಮಾಡುತ್ತಿದ್ದವರಿಗೆ ಮೀಸಲಾತಿ ಖುಷಿಯಾಗಿದೆ. ಕಾಂಗ್ರೆಸ್ ನಾಯಕರಿಗೆ ಮಾತ್ರ ಕಸಿವಿಸಿಯಾಗಿದೆ ಎಂದು ತಿಳಿಸಿದರು.
ಈರೇಶ್ ಅಂಚಟಗೇರಿಯವರು ಟಿಕೇಟ್ ಕೇಳುತ್ತಿರೊ ವಿಚಾರವಾಗಿ ಮಾತನಾಡಿ, ಈರೇಶ ಅಂಚಟಗೇರಿ ಅವರು ತಮ್ಮ ಆಸೆಯಂತೆ ಟಿಕೆಟ್ ಕೇಳಿದ್ದಾರೆ. ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ, ನನಗೆ ಯಾರೇ ಎದುರಾಳಿಯಾದರೂ ಕಳೆದ ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಅರವಿಂದ ಬೆಲ್ಲದ್ ತಿಳಿಸಿದರು.