ಬಿಎಸ್‌ವೈ ನಿವಾಸಕ್ಕೆ ಶಾ ಭೇಟಿ ಮುಖಂಡರ ವಲಸೆ ತಡೆಗೆ ತಾಕೀತು

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನಿವಾಸದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಉಪಹಾರ ಸೇವಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮುಲು,ಬಿವೈ.ರಾಘವೇಂದ್ರ ಇದ್ದಾರೆ.

ಬೆಂಗಳೂರು,ಮಾ.೨೪-ರಾಜ್ಯ ವಿಧಾನಸಭೆಯ ಚುನಾವಣೆಯ ಮೇಲೆ ಕಣ್ಣಿಟ್ಟು ರಾಜ್ಯಕ್ಕೆ ಕಳೆದ ಒಂದು ತಿಂಗಳಿಂದ ನಿಯಮಿತವಾಗಿ ಭೇಟಿ ನೀಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಬೆಂಗಳೂರಿಗೆ ಆಗಮಿಸಿದ್ದು, ಇಂದು ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ನಿವಾಸದಲ್ಲಿ ಮುಖಂಡರುಗಳ ಜತೆ ಉಪಾಹಾರ ಸಭೆ ನಡೆಸಿ, ಚುನಾವಣಾ ರಣ ತಂತ್ರಗಳ ಬಗ್ಗೆ ಚರ್ಚಿಸಿ ಬಿಜೆಪಿಯ ಯಾವುದೇ ನಾಯಕರುಗಳು ಅನ್ಯ ಪಕ್ಷಗಳತ್ತ ಮುಖ ಮಾಡದಂತೆ ಎಚ್ಚರ ವಹಿಸುವಂತೆಯೂ ತಾಕೀತು ಮಾಡಿದರು.
ವಿಧಾನಸಭೆಯ ಚುನಾವಣೆಯ ಈ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಅಮಿತ್ ಶಾ ಯಡಿಯೂರಪ್ಪರವರ ಮನೆಗೆ ಭೇಟಿ ನೀಡಿರುವುದು ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿದೆ. ತಮ್ಮ ಮನೆಗೆ ಆಗಮಿಸಿದ ಅಮಿತ್ ಶಾರವರಿಗೆ ಪುಷ್ಪಗುಚ್ಛ ನೀಡಲು ಮುಂದಾದಾಗ ಅಮಿತ್ ಶಾ ಪುಷ್ಪಗುಚ್ಛವನ್ನು ವಿಜಯೇಂದ್ರರವರಿಗೆ ನೀಡಿ ಎಂದು ಅವರಿಂದ ಪುಷ್ಪಗುಚ್ಛ ಸ್ವೀಕರಿಸಿ ಬೆನ್ನು ತಟ್ಟಿ ವಿಶೇಷ ಪ್ರೀತಿ ತೋರಿದ್ದು ವಿಶೇಷವಾಗಿತ್ತು.
ಬೆಂಗಳೂರಿನಲ್ಲಿಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಅಮಿತ್ ಶಾ, ಇಂದು ಬೆಳಿಗ್ಗೆಯೇ ಯಡಿಯೂರಪ್ಪರವರ ನಿವಾಸಕ್ಕೆ ಆಗಮಿಸಿ ಅಲ್ಲಿ ಎಲ್ಲ ಮುಖಂಡರ ಜತೆ ಚುನಾವಣಾ ಗೆಲುವಿಗೆ ಏನೆಲ್ಲ ರಣತಂತ್ರಗಳನ್ನು ರೂಪಿಸಬೇಕು ಎಂಬ ಬಗ್ಗೆ ಉಪಾಹಾರ ಸಭೆಯಲ್ಲಿ ಸಮಾಲೋಚಿಸಿ, ಬಿಜೆಪಿಯ ಕೆಲ ಸಚಿವರು, ಶಾಸಕರು ಕಾಂಗ್ರೆಸ್ ಸೇರ್ಪಡೆ ಸುದ್ದಿಗಳ ಬಗ್ಗೆಯೂ ಪ್ರಸ್ತಾಪಿಸಿ ಬಿಜೆಪಿಯ ಯಾರೊಬ್ಬರೂ ಬೇರೆ ಪಕ್ಷಕ್ಕೆ ಸೇರ್ಪಡೆಯಾಗಬಾರದು. ಯಾವುದೇ ಅಸಮಾಧಾನಗಳಿದ್ದರೆ ಮಾತುಕತೆಗಳ ಮೂಲಕ ಬಗೆಹರಿಸೋಣ, ಈ ಬಗ್ಗೆ ಎಚ್ಚರ ವಹಿಸಿ ಎಂದು ರಾಜ್ಯದ ಮುಖಂಡರುಗಳಿಗೆ ಸೂಚನೆ ನೀಡಿದರು.
ಬಿಜೆಪಿಯ ನಾಯಕರುಗಳು ಬೇರೆ ಪಕ್ಷ ಸೇರ್ಪಡೆ ಬಗ್ಗೆ ಮಾಹಿತಿಗಳಿದ್ದರೆ ಹೇಳಿ. ಆ ಮುಖಂಡರ ಜತೆ ನಾನೇ ಚರ್ಚಿಸುತ್ತೇನೆ. ಚುನಾವಣಾ ಸಂದರ್ಭದಲ್ಲಿ ಈ ರೀತಿಯ ವಲಸೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ. ಯಾವುದೇ ಮುಖಂಡರುಗಳಿಗೆ ಅಸಮಾಧಾನವಿದ್ದರೆ ಅದನ್ನು ಚರ್ಚೆಯ ಮೂಲಕ ಬಗೆಹರಿಸೋಣ. ಪಕ್ಷ ಬಿಟ್ಟರೆ ಬಿಡಲಿ ಎಂಬ ಧೋರಣೆ ಬೇಡ ಎಂದು ಕಿವಿಮಾತು ಹೇಳಿದರು.
ಚುನಾವಣೆಗಳು ಯಾವ ಕ್ಷಣದಲ್ಲಿ ಬೇಕಾದರೂ ಘೋಷಣೆಯಾಗಬಹುದು. ಹಾಗಾಗಿ, ನೀತಿ ಸಂಹಿತೆ ಜಾರಿಗೆ ಮೊದಲೇ ಬಾಕಿ ಇರುವ ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾಪನೆಗಳನ್ನು ಪೂರ್ಣಗೊಳಿಸಿ. ಹಾಗೆಯೇ, ಪಕ್ಷದ ಸಮಾವೇಶಗಳನ್ನು ಎಲ್ಲ ಜಿಲ್ಲೆಗಳಲ್ಲೂ ಆಯೋಜಿಸಿ ಚುನಾವಣಾ ಗೆಲುವಿಗೆ ಏನೆಲ್ಲ ಸಿದ್ಧತೆಗಳಾಗಬೇಕೋ ಆ ಕಡೆ ಚಿತ್ತ ಹರಿಸಿ ಕಾಹರಣ ಬೇಡ ಎಂದು ಅಮಿತ್ ಶಾ ಹೇಳಿದರು.
ಇಂದಿನ ಉಪಾಹಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು, ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಚಿವರುಗಳಾದ ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಸೇರಿದಂತ ಪ್ರಮುಖ ನಾಯಕರುಗಳು ಭಾಗಿಯಾಗಿದ್ದರು.