ಬೆಂಗಳೂರು,ಸೆ.೨೪:ಬಿಜೆಪಿ-ಜೆಡಿಎಸ್ ಮೈತ್ರಿ ಏರ್ಪಟ್ಟ ಬೆನ್ನಲ್ಲೆ ಜೆಡಿಎಸ್ ಯುವ ಮುಖಂಡ ನಿಖಿಲ್‌ಕುಮಾರಸ್ವಾಮಿ ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿ ಮಾಡಿದ್ದರು. ಮಾಜಿಮುಖ್ಯಮಂತ್ರಿ ಯಡಿಯೂರಪ್ಪರವರ ಡಾಲರ್‍ಸ್ ಕಾಲೋನಿ ನಿವಾಸಕ್ಕೆ ತೆರಳಿದ್ದ ನಿಖಿಲ್ ಕುಮಾರಸ್ವಾಮಿ, ಯಡಿಯೂರಪ್ಪರವರಿಗೆ ಶಾಲು ಹೊದಿಸಿ, ಹಾರ ಹಾಕಿ ಅವರ ಕಾಲುಮುಟ್ಟಿ ನಮಸ್ಕರಿಸಿ ಆರ್ಶೀವಾದ ಪಡೆದುಕೊಂಡರು.
ದೊಂದು ಸೌಹಾರ್ದ ಹಾಗೂ ಸೌಜನ್ಯ ಭೇಟಿ, ಯಾವುದೇ ರಾಜಕೀಯ ವಿಚಾರವನ್ನು ಯಡಿಯೂರಪ್ಪರವರ ಜತೆ ಮಾತನಾಡಿಲ್ಲ ಎಂದು ನಿಖಿಲ್‌ಕುಮಾರಸ್ವಾಮಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರು ರಾಜ್ಯದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ. ಹಿರಿಯರ ಆರ್ಶೀವಾದ ಪಡೆದುಕೊಳ್ಳುವುದು ನಮ್ಮ ಸಂಸ್ಕೃತಿ ಹಾಗಾಗಿ ಭೇಟಿ ಮಾಡಿ ಆರ್ಶೀವಾದ ಪಡೆದುಕೊಂಡಿದ್ದೇನೆ ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಈಗ ನಾನು ಮಾತನಾಡಲ್ಲ, ಮಾತನಾಡಲು ಇದು ಸೂಕ್ತ ಸಮಯವೂ ಅಲ್ಲ, ನಾನು ಎಂದೂ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಹೇಳಿಲ್ಲ ಎಂದರು.
ಬಿಜೆಪಿ ಜತೆಗಿನ ಮೈತ್ರಿಗೆ ಮಾಜಿ
ಸಚಿವ ರೇವಣ್ಣ ಅವರ ಸಂಪೂರ್ಣ ಒಪ್ಪಿಗೆಯೂ ಇದೆ. ಅವರು ಹೊಳೆನರಸೀಪುರದಲ್ಲಿ ಅವಶ್ಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಬೇಕಾದ್ದರಿಂದ ದೆಹಲಿ ಸಭೆಗೆ ಬರಲಿಲ್ಲ ಅಷ್ಟೆ. ಮೈತ್ರಿಗೆ ಅವರ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಹಿತ ದೃಷ್ಟಿಯಿಂದ ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯನ್ನು ಎರಡೂ ಪಕ್ಷಗಳು ಒಟ್ಟಾಗಿ ಎದುರಿಸಲಿವೆ ಎಂದರು.