ಬಿಎಸ್‌ವೈ ಕರೆಗೆ ತಣ್ಣಗಾದ ರುದ್ರೇಶ್

ಚಾಮರಾಜನಗರ,ಏ.೧೪:ಚಾಮರಾಜನಗರ ಕ್ಷೇತ್ರದಲ್ಲಿ ಸಚಿವ ಸೋಮಣ್ಣ ವಿರುದ್ಧ ಬಂಡಾಯ ಎದ್ದು ಟೀಕಾ ಪ್ರಹಾರ ನಡೆಸಿದ್ದ ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ಆರ್. ರುದ್ರೇಶ್ ಈಗ ತಣ್ಣಗಾಗಿ ಸದ್ದಿಲ್ಲದೆ ಚಾಮರಾಜ ನಗರದಿಂದ ನಿರ್ಗಮಿಸಿದ್ದಾರೆ.
ಚಾಮರಾಜ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರುದ್ರೇಶ್, ಸೋಮಣ್ಣರವರಿಗೆ ಟಿಕೆಟ್ ಸಿಕ್ಕ ನಂತರ ಸುದ್ದಿಗೋಷ್ಠಿಯಲ್ಲಿ ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಸಚಿವ ಸೋಮಣ್ಣರವರ ಪುತ್ರ ಅರುಣ್ ಸೋಮಣ್ಣ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ರವರಿಗೆ ದೂರು ಕೊಟ್ಟಿದ್ದರು. ಈ ದೂರಿನ ಬೆನ್ನಲ್ಲೆ ಅರುಣ್‌ಸಿಂಗ್ ಮಾಜಿ ಮುಖ್ಯಮಂತ್ರಿ ಯುಡಿಯೂರಪ್ಪರ ಜತೆ ಮಾತನಾಡಿ ರುದ್ರೇಶ್‌ರವರಿಗೆ ಬುದ್ಧಿ ಹೇಳುವಂತೆ ಮನವಿ ಮಾಡಿದ್ದರು.
ತಮ್ಮ ಆಪ್ತ ವಲಯದಲ್ಲಿರುವ ರುದ್ರೇಶ್‌ರವರ ನಡೆಯಿಂದ ಸಿಟ್ಟುಗೊಂಡ ಯಡಿಯೂರಪ್ಪರವರು ದೂರವಾಣಿ ಮಾಡಿ ಪಕ್ಷ ಸಂಘಟನೆಯಲ್ಲಿ ಒಡಕು ಮೂಡಿಸುವುದು ಬೇಡ, ಪಕ್ಷದ ಅಭ್ಯರ್ಥಿ ವಿರುದ್ಧ ಮಾತನಾಡದಂತೆ ತಾಕೀತು ಮಾಡಿದ್ದರು.
ಯಡಿಯೂರಪ್ಪರವರ ಬುದ್ಧಿ ಮಾತು ಹೇಳುತ್ತಿದ್ದಂತೆಯೇ ಥಂಡಾ ಹೊಡೆದ ರುದ್ರೇಶ್, ಸದ್ದಿಲ್ಲದೆ ಕ್ಷೇತ್ರದಿಂದ ನಿರ್ಗಮಿಸಿದ್ದಾರೆ. ರುದ್ರೇಶ್ ತಣ್ಣಗಾಗಿ ಬೆಂಗಳೂರಿಗೆ ತೆರಳಿರುವುದರಿಂದ ಸಚಿವ ಸೋಮಣ್ಣ ಹಾದಿ ಸುಗಮವಾದಂತಾಗಿದೆ.
ಕ್ಷೇತ್ರದಲ್ಲಿ ಬಹುಮಟ್ಟಿಗೆ ಬಂಡಾಯ ಶಮನವಾದಂತಾಗಿದೆ.