ಬಿಎಸ್‌ವೈಗೆ ಚುನಾವಣಾ ಸಮಿತಿ ಅಧ್ಯಕ್ಷ ಪಟ್ಟ

ಬೆಂಗಳೂರು,ಮಾ.೨-ಮುಂದಿನ ಚುನಾವಣೆಯನ್ನು ವೀರಶೈವ ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ತಂತ್ರ ರೂಪಿಸಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆಗಳಿವೆ.
ಬಿಜೆಪಿ ಯಡಿಯೂರಪ್ಪರವರನ್ನು ಕಡೆಗಣಿಸಿದೆ ಎಂಬ ವಿಪಕ್ಷ ನಾಯಕರುಗಳ ಮಾತುಗಳಿಗೆ ತಡೆ ಹಾಕಲು ಯಡಿಯೂರಪ್ಪರವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿಸಿ ಯಡಿಯೂರಪ್ಪರವರನ್ನು ಕಡೆಗಣಿಸಿಲ್ಲ ಎಂಬ ಸಂದೇಶದ ಜತೆಗೆ ಲಿಂಗಾಯತ ಮತಗಳನ್ನು ಸೆಳೆಯುವ ಲೆಕ್ಕಾಚಾರವನ್ನು ಬಿಜೆಪಿ ನಾಯಕರು ನಡೆಸಿದ್ದಾರೆ.
ವೀರಶೈವ ಲಿಂಗಾಯತ ಮತಗಳು ಬಿಜೆಪಿ ಬಿಟ್ಟು ಬೇರೆ ಪಕ್ಷಗಳಿಗೆ ಹೋಗದಂತೆ ತಡೆಯಲು ಯಡಿಯೂರಪ್ಪರವರಿಗೆ ಒಂದು ಸ್ಥಾನಮಾನ ಕೊಡುವ ಚರ್ಚೆಗಳು ಬಿಜೆಪಿಯ ವರಿಷ್ಠ ಮಟ್ಟದಲ್ಲಿ ನಡೆದಿದ್ದು, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಎಲ್ಲವೂ ಸರಿ ಹೋಗುತ್ತದೆ ಎಂಬ ಲೆಕ್ಕಾಚಾರದ ಮೇಲೆ ಹೈಕಮಾಂಡ್ ಯಡಿಯೂರಪ್ಪರವರನ್ನು ಸದ್ಯದಲ್ಲೇ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಕಳೆದ ಸೋಮವಾರ ಪ್ರಧಾನಿ ಮೋದಿ ಅವರು ರಾಜ್ಯ ಭೇಟಿ ಸಂದರ್ಭದಲ್ಲಿ ಯಡಿಯೂರಪ್ಪರವರನ್ನು ಹಾಡಿ ಹೊಗಳಿದ್ದರು. ಇದಕ್ಕೆ ವಿಪಕ್ಷಗಳು ಟೀಕೆ ಮಾಡಿ ಯಡಿಯೂರಪ್ಪರವರನ್ನು ಕಣ್ಣೀರಾಕಿಸಿ ಮುಖ್ಯಮಂತ್ರಿ ಹುದ್ದೆಯಿಂದ ತೆಗೆದು ಈಗ ಚುನಾವಣೆ ಬಂತೆಂದ್ದು ಅವರನ್ನು ಓಲೈಸುವ ನಾಟಕವನ್ನು ಬಿಜೆಪಿ ನಾಯಕರು ನಡೆಸಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಟೀಕಿಸಿದ್ದವು. ಮುಂದೆ ಈ ಮಾತುಗಳು ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಗಬಹುದು ಎಂಬ ಹಿನ್ನೆಲೆಯಲ್ಲಿ ವರಿಷ್ಠರು ಯಡಿಯೂರಪ್ಪರವರನ್ನೇ ಚುನಾವಣೆಯ ಮುಂಚೂಣಿಗೆ ತರಲು ತೀರ್ಮಾನಿಸಿದ್ದು, ಅದರಂತೆ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದೆ.