ಬಿಎಸ್‍ಎಸ್ಕೆ ಕಾರ್ಖಾನೆಗೆ ಕಾಯಕಲ್ಪ ನೀಡುತ್ತಾ ಹೊಸ ಸರ್ಕಾರ?

ಬೀದರ್:ಮೇ.22: ಗ್ಯಾರಂಟಿ’ ಯೋಜನೆಗಳ ಭರವಸೆಗಳನ್ನು ಹೊತ್ತು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪರ್ವ ಶುರುವಾಗಿದ್ದು, ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮರ ಸಾರಥ್ಯ ವಹಿಸಿದ್ದಾರೆ. ಶಾಶ್ವತ ನೀರಾವರಿ ಮತ್ತು ಕೈಗಾರಿಕೆಗಳ ಸ್ಥಾಪನೆಯಂಥ ಹಳೆ ಕನಸುಗಳ ಜತೆಗೆ ಅಭಿವೃದ್ಧಿಯ ಹೊಸ ನಿರೀಕ್ಷೆಗಳನ್ನು ನೂತನ ಸರ್ಕಾರ ಈಡೇರಿಸಲಿ ಎಂಬುದು ಧರಿನಾಡು ಬೀದರ ಜನರ ಆಶಯ.

ಹಿಂದಿನ ಐದು ವರ್ಷದ ಬಿಜೆಪಿ ಸರ್ಕಾರ ಆಡಳಿತ ಅವಧಿಯಲ್ಲಿ ಗಡಿ ಜಿಲ್ಲೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ
ಸಾಧಿಸಿಲ್ಲ. ಕೆಲವು ಯೋಜನೆಗಳು ಅನುಷ್ಠಾನಕ್ಕೆ ಬಂದಿದ್ದರೆ, ಇನ್ನುಳಿದವುಗಳು ಕೇವಲ ಶಂಕುಸ್ಥಾಪನೆ,
ಸರ್ಕಾರದ ಕಡತಗಳಿಗೆ ಮಾತ್ರ ಸೀಮಿತವಾದವು. ಹಾಗಾಗಿ ಕಾಂಗ್ರೆಸ್ ಆಡಳಿತದಲ್ಲಿ ಹೊಸ ಮೈತ್ರಿ ಸರ್ಕಾರ ಹಳೆ ಭರವಸೆಗಳ ಜತೆಗೆ ಅಭಿವೃದ್ಧಿಯ ಹೊಸ ಯೋಜನೆಗಳನ್ನು ಜಾರಿಗೆ ತರಲಿ ಎಂಬುದು ಜನರ ನಿರೀಕ್ಷೆಯಾಗಿದೆ. ಮುಖ್ಯವಾಗಿ ಕೈಗೆ ಉದ್ಯೋಗ ಸೃಷ್ಟಿಸುವಂಥ ಕೈಗಾರಿಕೆಗಳ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿ, ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ಸಿಗಬೇಕಿದೆ.

ಮುಖ್ಯವಾಗಿ ನೀರಾವರಿ ಯೋಜನೆಗಳಿಗೆ ಆದ್ಯತೆ ಸಿಗಬೇಕಿದೆ. ಗೋದಾವರಿ ಬೇಸ್‍ನಿಂದ ಬೇಡಿಕೆಯಂತೆ ನೀರಿನ ಸದ್ಬಳಕೆಗೆ ಅಗತ್ಯ ಬ್ಯಾರೇಜ್ ಗಳನ್ನು ನಿರ್ಮಿಸುವುದು ಮತ್ತು ಕೆರೆಗಳನ್ನು ತುಂಬಿಸಿ ನೀರಾವರಿ ಪ್ರದೇಶವನ್ನು ಹೆಚ್ಚಿಸಬೇಕಿದೆ. ಇನ್ನೂ ಅಪೂರ್ಣ ಸ್ಥಿತಿಯಲ್ಲಿರುವ ಕಾರಂಜಾ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಬೇಕು ಮತ್ತು ಕಾಲುವೆಗಳ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಹಲವು ವರ್ಷಗಳ ಬೇಡಿಕೆಯಾಗಿರುವ ಕೃಷಿ ಕಾಲೇಜು
ಸ್ಥಾಪನೆಗೆ ಹೆಜ್ಜೆ ಇಡಬೇಕಿದೆ.

ಜಿಲ್ಲೆಯ ರೈತರ ಜೀವನಾಡಿ ಆಗಿರುವ ಬಿಎಸ್ ಎಸ್‍ಕೆ ಕಾರ್ಖಾನೆ ಸಾಲದ ಹೊರೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬೀಗ ಹಾಕಲಾಗಿದ್ದು, ಕಾರ್ಮಿಕರು ಕೆಲಸ-ವೇತನ ಇಲ್ಲದೇ ಬೀದಿಗೆ ಬಿದ್ದಿದ್ದರೆ ಕಬ್ಬು ಬೆಳೆಗಾರರು ಕಂಗಾಲಾಗಿದ್ದಾರೆ. ಹೊಸ ಸರ್ಕಾರ ನೀಡಿರುವ ಭರವಸೆಯಂತೆ ಬಿಎಸ್‍ಎಸ್‍ಕೆ ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಪ್ಯಾಕೇಜ್ ಘೋಷಿಸಬೇಕಿದೆ.

ಜತೆಗೆ ಕಾರಂಜಾ ಯೋಜನೆಯಡಿ ನಿರಾಶ್ರಿತರಾಗಿರುವ ಕುಟುಂಬಗಳಿಗೆ ವೈಜ್ಞಾನಿಕ ಪರಿಹಾರ ಕಲ್ಪಿಸಿ ವರ್ಷದಿಂದ
ನಡೆಸುತ್ತಿರುವ ಧರಣಿಗೆ ನ್ಯಾಯ ಒದಗಿಸಬೇಕಿದೆ. ಆಂಧ್ರ, ಮಹಾರಾಷ್ಟ್ರಕ್ಕೆ ಗಡಿಗೆ ಅಂಟಿಕೊಂಡಿದ್ದರೂ ಜಿಲ್ಲೆಯಲ್ಲಿ ಕೈಗಾರಿಕೆಗಳೇ ಇಲ್ಲ. ಹಾಗಾಗಿ ಇಲ್ಲಿನ ಯುವ ಜನಾಂಗ ಉದ್ಯೋಗಕ್ಕಾಗಿ ಮಹಾನಗರಗಳತ್ತ ವಲಸೆ ಹೋಗುತ್ತಿದ್ದು, ಇದನ್ನು ತಪ್ಪಿಸಲು ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕಿದೆ. ಸ್ಮಾರಕಗಳು, ಕೋಟೆ-

ಕೊತ್ತಲಗಳನ್ನು ಹೊಂದಿರುವ ಜಿಲ್ಲೆ ಪ್ರವಾಸೋದ್ಯಮ ಬೆಳವಣಿಗೆಯಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು
ಸಾಧ್ಯವಿದೆ. ಆದರೆ, ಇದಕ್ಕೆ ಪೂರಕವಾಗಿ ಬೀದರನಲ್ಲಿ ಗೈಡ್‍ಗಳ ವ್ಯವಸ್ಥೆ ಇಲ್ಲ.

ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಒದಗಿಸಿ, ಅಧಿಕಾರಿಗಳ ನೇಮಕ ಮಾಡಬೇಕು. ಐದು ತಾಲೂಕು ಗಳಲ್ಲಿ ಮಿನಿ ವಿಧಾನಸೌಧ ಹೊಂದಿದ್ದು, ಜಿಲ್ಲಾ ಕೇಂದ್ರ ಬೀದರನಲ್ಲಿ ಈವರೆಗೆ ಜಿಲ್ಲಾ ಕಚೇರಿಗಳ ಸಂಕೀರ್ಣವೂ ಇಲ್ಲ. ಜಿಲ್ಲಾಧಿ ಕಾರಿ ಕಚೇರಿಯನ್ನೇ ಸಂಕೀರ್ಣವನ್ನಾಗಿ ಪುನರ್ ನಿರ್ಮಾಣಕ್ಕೆ ಈಗ ನಿರ್ಧರಿಸಿ ಹಲವು ದಿನಗಳು ಕಳೆದರೂ ಚುನಾಯಿತ ಪ್ರತಿನಿಧಿಗಳ ಒಣ ಪ್ರತಿಷ್ಠೆಯಿಂದ ನನೆಗುದಿಗೆ ಬಿದ್ದಿದೆ. ಹೊಸ ಸರ್ಕಾರ ಇತ್ತ ಗಮನ ಹರಿಸಬೇಕಿದೆ. ಬಸವಕಲ್ಯಾಣದಲ್ಲಿ 600 ಕೋಟಿ ರೂ. ವೆಚ್ಚದ ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ನಿಗದಿತ ಅವ ಧಿಯೊಳಗೆ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ಬಜೆಟ್ ನಲ್ಲಿ ಪೂರಕ ಅನುದಾನ ಮೀಸಲಿಡಬೇಕಿದೆ. ಜತೆಗೆ ಬಸವಾದಿ ಶರಣರ ಸ್ಮಾರಕಗಳ ಅಭಿವೃದ್ಧಿಗೆ ಸರ್ಕಾರ ರಚಿಸಿರುವ ಬಿಕೆಡಿಬಿಗೆ ಪೂರಕ ಅನುದಾನ ಸಿಗದ ಕಾರಣ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು, ಅಗತ್ಯ ಹಣ ಬಿಡುಗಡೆ ಮಾಡಿ ಕೆಲಸ ಚುರುಕುಗೊಳಿಸಬೇಕು ಮತ್ತು ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಬೇಕೆಂಬುದು ಸಾರ್ವಜನಿಕರ ಅನಿಸಿಕೆ.