
ಲಂಡನ್, ಆ.೧೧- ಇತ್ತೀಚಿಗಿನ ದಿನಗಳಲ್ಲಿ ಹವಾಮಾನ ಬದಲಾವಣೆ, ಹಸಿರುಮನೆ ಪರಿಣಾಮ ಮುಂತಾದ ವಿಷಯಗಳು ಪ್ರಮುಖ ವಿಚಾರವಾಗಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ಸಂಕೇತ ಭಾಷಾ ತಜ್ಞರು ಇದೀಗ ಬ್ರಿಟಿಷ್ ಸಂಕೇತ ಭಾಷೆ (ಬಿಎಸ್‌ಎಲ್)ಗೆ ನೂರಾರು ಹೊಸ ಸಂಕೇತಗಳನ್ನು ರಚಿಸಿದ್ದಾರೆ.
ಬಿಎಸ್‌ಎಲ್‌ನ ಹೊಸ ಸಂಕೇತ ಭಾಷೆಯಲ್ಲಿ ಇದೀಗ ಹಸಿರುಮನೆ ಅನಿಲ” ಮತ್ತು “ಇಂಗಾಲದ ಹೆಜ್ಜೆಗುರುತು” ನಂತಹ ಹವಾಮಾನ-ಸಂಬಂಧಿತ ಪದಗಳನ್ನು ಒಳಗೊಂಡಿದೆ. ಇದಕ್ಕೂ ಮುನ್ನ ಈ ಪದಗಳಿಗೆ ಯಾವುದೇ ರೀತಿಯಲ್ಲಿ ಸಂಕೇತಗಳಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆ, ಹಸಿರುಮನೆ ಮುಂತಾದ ವಿಚಾರಗಳು ಹೆಚ್ಚಿನ ಪ್ರಮಾಣದಲ್ಲಿ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಹಾಗೂ ಬ್ರಿಟಿಷ್ ಸಂಕೇತ ಭಾಷಾ ತಜ್ಞರು ಹೊಸ ಸಂಕೇತಗಳನ್ನು ರಚಿಸಿದ್ದಾರೆ. ಹಾಗಾಗಿ ಇನ್ನು ಮುಂದೆ ಮಕ್ಕಳು, ಶಿಕ್ಷಕರು ಮತ್ತು ವಿಜ್ಞಾನಿಗಳು ಸಾಮಾನ್ಯವಾಗಿ ದೀರ್ಘ, ಸಂಕೀರ್ಣ, ವೈಜ್ಞಾನಿಕ ಪದಗಳನ್ನು ಬೆರಳಿನ ಮೂಲಕ ಉಚ್ಛರಿಸಬಹುದಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಸಂಕೇತ ಭಾಷಾ ಯೋಜನೆಯನ್ನು ಮುನ್ನಡೆಸುತ್ತಿರುವ ಡಾ. ಆಡ್ರೆ ಕ್ಯಾಮರೊನ್, ವೈಜ್ಞಾನಿಕ ಪರಿಕಲ್ಪನೆಗಳನ್ನು ದೃಶ್ಯೀಕರಿಸುವ ಪರಿಪೂರ್ಣ ಚಿಹ್ನೆಗಳನ್ನು ರಚಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾನು ಕಳೆದ ೧೧ ವರ್ಷಗಳ ಕಾಲ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ಹಲವಾರು ಸಭೆಗಳಿಗೆ ಹೋಗಿದ್ದೆ. ಆದರೆ ಜನರು ಏನು ಹೇಳುತ್ತಿದ್ದಾರೆಂದು ನನಗೆ ಅರ್ಥವಾಗದ ಕಾರಣ, ಈ ವಿಚಾರದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ನಾನು ಜನರೊಂದಿಗೆ ರಸಾಯನಶಾಸ್ತ್ರದ ಬಗ್ಗೆ ಮಾತನಾಡಲು ಬಯಸಿದ್ದರೂ ಅದು ನನಗೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ಸ್ವತಹ ಕಿವಿ ಕೇಳಲು ಸಾಧ್ಯವಾಗದಿರುವ ಕ್ಯಾಮರೊನ್ ಸದ್ಯ ಹೊಸ ಸಂಕೇತ ಭಾಷಾ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಇನ್ನು ಗ್ಲ್ಯಾಸ್ಗೋ ಮೂಲದ ಜೀವಶಾಸ್ತ್ರ ಶಿಕ್ಷಕ ಲಿಯಾಮ್ ಮೆಕ್‌ಮುಲ್ಕಿನ್ ಸಹ ಸ್ಕಾಟಿಷ್ ಸೆನ್ಸರಿ ಸೆಂಟರ್ ಆಯೋಜಿಸಿರುವ ಸೈನ್-ರಚನೆ ಕಾರ್ಯಾಗಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.