ಬಿಎಲ್‍ಡಿಇ ಆಸ್ಪತ್ರೆಯಲ್ಲಿ 200 ಆಕ್ಸಿಜನ್ ಬೆಡ್‍ಗಳ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನಃ ಮಾಜಿ ಸಚಿವ ಎಂ.ಬಿ ಪಾಟೀಲ್

ವಿಜಯಪುರ, ಮೇ.4-ವಿಜಯಪುರದ ಬಿಎಲ್‍ಡಿಇ ಆಸ್ಪತ್ರೆಯಲ್ಲಿ ಇನ್ನೂ 15 ರಿಂದ 20 ದಿನಗಳಲ್ಲಿ 200 ಆಕ್ಸಿಜನ್ ಬೆಡ್‍ಗಳ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಬಿಎಲ್‍ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ. ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ಕೊರೊನಾ ಪರಿಸ್ಥಿತಿ ಮೀತಿ ಮೀರಿದೆ, ಈ ನಿಟ್ಟಿನಲ್ಲಿ ಬಿಎಲ್‍ಡಿಇ ಸಂಸ್ಥೆ ಚಿಕಿತ್ಸಾ ವೆಚ್ಚವನ್ನು ಕಡಿತಗೊಳಿಸಿ ಶಕ್ತಿಮೀರಿ ಆರೋಗ್ಯ ಸೇವೆ ಒದಗಿಸುತ್ತಿದೆ, ಇದು ಒಂದು ಉಪಕಾರವಲ್ಲ, ಇದು ನಮ್ಮ ಕರ್ತವ್ಯ, ಈ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ವೈದ್ಯರ ತಂಡ ಶ್ರಮಿಸುತ್ತಿದೆ, ಅನೇಕ ವೈದ್ಯರು, ಸಿಬ್ಬಂದಿ ಕೋವಿಡ್‍ಗೆ ತುತ್ತಾಗಿದ್ದಾರೆ ಎಂದರು.
ಬಿಎಲ್‍ಡಿಇ ಆಸ್ಪತ್ರೆಯ ಪಕ್ಕದಲ್ಲಿ ಟ್ರಾಮಾ ಸೆಂಟರ್ ಕಟ್ಟಡ ಬಹುತೇಕ ಪೂರ್ಣಗೊಂಡಿದೆ, ಈ ಹಿನ್ನೆಲೆಯಲ್ಲಿ ಅಲ್ಲಿ ಇನ್ನೊಂದು 200 ಆಕ್ಸೀಜನ್ ಬೆಡ್‍ಗಳನ್ನು ಅಳವಡಿಸುವ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನ ನಡೆಯುತ್ತಿದೆ ಎಂದರು.
ಇಷ್ಟಾದರೂ ಆಸ್ಪತ್ರೆಯಲ್ಲಿ ಬೆಡ್ ಕೊರತೆ ನೀಗಿಲ್ಲ, ರಾತ್ರಿ 2 ಗಂಟೆಗೂ ಸಹ ನನಗೆ ಬೆಡ್ ವ್ಯವಸ್ಥೆ ಮಾಡಿ ಎಂದು ಕರೆ ಬರುತ್ತಿವೆ, ಆದರೂ ನಾವು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ ಎಂದರು.
ಪ್ರಸ್ತುತ ಆಸ್ಪತ್ರೆಯಲ್ಲಿ ಆಕ್ಸೀಜನ್ ಕೊರತೆ ಸರಿದೂಗಿಸಲಾಗಿದೆ, ಇನಷ್ಟೂ ಕೊರತೆ ಸರಿದೂಗಿಸುವ ದೃಷ್ಟಿಯಿಂದ ಆಸ್ಪತ್ರೆಯಲ್ಲಿಯೇ 111 ಕೆಎಲ್‍ಡಿ ಸಾಮಥ್ರ್ಯದ ಆಕ್ಸೀಜನ್ ಉತ್ಪಾದನಾ ಘಟಕ ನಿರ್ಮಾಣಕ್ಕೆ ಅನುಮತಿ ದೊರಕಿದೆ, ಈ ಕಾರ್ಯ ಸಹ ಶೀಘ್ರವೇ ಆರಂಭವಾಗಲಿದೆ ಎಂದರು.
ದಯಮಾಡಿ ಅನಾವಶ್ಯಕವಾಗಿ ಹೊರಗೆ ಬರಬೇಡಿಃ ಕೊರೊನಾ ಭೀಕರ ಸಂದರ್ಭ ಸೃಷ್ಟಿ ಮಾಡಿದೆ, ಬೆಡ್ ಸಿಗುತ್ತಿಲ್ಲ, ಔಷಧಿ ಸಿಗುತ್ತಿಲ್ಲ, ಆಕ್ಸೀಜನ್ ಸಿಗುತ್ತಿಲ್ಲ, ಹೀಗಾಗಿ ರೋಗ ಬಂದು ತೊಂದರೆ ಅನುಭವಿಸುವುದಕ್ಕಿಂತ ರೋಗ ಬಾರದಂತೆ ತಡೆಗಟ್ಟುವುದು ಮಹತ್ವ, ಈ ಹಿನ್ನೆಲೆಯಲ್ಲಿ ಜನತೆ ವಿನಾಕರಣ ಮನೆಯಿಂದ ಹೊರಗೆ ಬರಬೇಡಿ, ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸೆನಿಟೈಜರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅದೇ ತೆರನಾಗಿ ಕೊರೊನಾ ಪ್ರತಿಬಂಧಕ ಲಸಿಕೆಯನ್ನು ಹಾಕಿಸಿಕೊಳ್ಳಿ ದಯಮಾಡಿ ಈ ಕೆಲಸ ಮಾಡಿ ಎಂದು ಕೈ ಮುಗಿದು ಬೇಡಿಕೊಳ್ಳುವೆ ಎಂದು ಪಾಟೀಲ್ ಮನವಿ ಮಾಡಿಕೊಂಡರು.
ಬಿಎಲ್‍ಡಿಇ ವೈದ್ಯಕೀಯ ವಿ.ವಿ. ಪ್ರಾಚಾರ್ಯ ಡಾ.ಅರವಿಂದ ಪಾಟೀಲ, ಅಧೀಕ್ಷಕ ಡಾ.ಹೊನ್ನುಟಗಿ, ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.