ಬಿಎಂ ಮುಬಾರಕ್ ಜೆಡಿಎಸ್ ಸೇರ್ಪಡೆ

ಕೋಲಾರ,ಏ,೨೯-ಕೋಲಾರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್ ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಬಿಡದಿ ಸಮೀಪದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿವಾಸದಲ್ಲಿ ಮುಬಾರಕ್ ಕೆಲವು ನಗರಸಭೆ ಸದಸ್ಯರ ಜತೆಗೆ ಜೆಡಿಎಸ್‌ಗೆ ಸೇರಿದ ವೇಳೆ ಎಂಎಲ್‌ಸಿ ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಜೆಡಿಎಸ್ ಮುಖಂಡರಾದ ವಕ್ಕಲೇರಿ ರಾಮು, ಸಿ.ಎಂ.ಆರ್.ಹರೀಶ್, ಜೆಟ್ ಅಶೋಕ್, ಬಾಲಗೋವಿಂದ, ಮುನೇಗೌಡ ಮತ್ತಿತರರು ಇದ್ದರು.
ಈ ವೇಳೆ ಮಾತನಾಡಿದ ಎಚ್.ಡಿ.ಕುಮಾರ ಸ್ವಾಮಿ ಮೂಲ ಜನತಾಪರಿವಾರದವರಾದ ಮುಬಾರಕ್ ಮರಳಿ ಮನೆಗೆ ಬಂದಿದ್ದಾರೆ. ಅವರು ಇಡೀ ಜಿಲ್ಲೆಯಲ್ಲಿ ಸಂಚರಿಸಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವರು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಮುಬಾರಕ್‌ಗೆ ಆ ಸ್ಥಾನ ಕೈತಪ್ಪಿದ ನಂತರ ಪಕ್ಷದಲ್ಲಿ ಬೇಸರಗೊಂಡಿದ್ದರು. ಕಳೆದ ಮೂರು ತಿಂಗಳಿನಿಂದಲೂ ತೆರೆಮರೆಯಲ್ಲಿ ಜೆಡಿಎಸ್‌ಗೆ ಸೇರ್ಪಡೆ ಆಗುವ ಪ್ರಯತ್ನಗಳು ನಡೆದಿದ್ದವು. ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಅದಕ್ಕೆ ತಡೆಯೊಡ್ಡಿದ್ದರು. ಬುಧವಾರ ನಸೀರ್ ಅಹ್ಮದ್‌ರನ್ನು ಭೇಟಿ ಮಾಡಿದ ಮುಬಾರಕ್ ತಾವು ಪಕ್ಷ ತೊರೆಯುವುದಾಗಿ ಹೇಳಿದರು.
ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತಾರೆ ಎಂಬ ಕಾರಣಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ಕೈ ತಪ್ಪಿದರೂ ಉಳಿದುಕೊಂಡಿದ್ದೆ. ಸಿದ್ಧರಾಮಯ್ಯ ಕೋಲಾರಕ್ಕೆ ಆಗಮಿಸುವುದಿಲ್ಲ ಎಂಬುದು ಖಚಿತವಾದ ಮೇಲೆ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬಹುದಾಗಿತ್ತು. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಿಯೂ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿಲ್ಲ ಎಂಬ ಕಾರಣ ಮುಂದೊಡ್ಡಿ ಮುಬಾರಕ್ ಪಕ್ಷ ತೊರೆದಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ ೩-೪ ದಿನಗಳ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಅನಿಲ್‌ಕುಮಾರ್, ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಮತ್ತಿತರರು ಸ್ವತಹ ಮುಬಾರಕ್ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ತಮ್ಮ ನಿರ್ಧಾರ ತಿಳಿಸಲು ಮೂರು ದಿನಗಳ ಕಾಲಾವಕಾಶ ಕೋರಿದ್ದ ಅವರು ನಸೀರ್ ಅಹ್ಮದ್‌ಗೆ ತಾವು ಕಾಂಗ್ರೆಸ್‌ನಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು ಎಂದು ಮೂಲಗಳು ತಿಳಿಸಿವೆ.