ಬಿಎಂಸಿಆರ್‌ಐನ ೧೩ ಮಂದಿಗೆ ಕೋವಿಡ್

ಬೆಂಗಳೂರು, ಏ. ೫- ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ೧೩ ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ನಗರದಲ್ಲಿ ಸೋಂಕಿನ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿರುವ ಬೆನ್ನಲ್ಲೇ ವೈದ್ಯಕೀಯ ಸಿಬ್ಬಂದಿಯೂ ಸೋಂಕಿಗೆ ತುತ್ತಾಗುತ್ತಿರುವುದು ಆತಂಕಕ್ಕೇಡೆ ಮಾಡಿಕೊಟ್ಟಿದೆ. ಅಚ್ಚರಿ ಎಂದರೆ ಲಸಿಕೆ ಪಡೆದವರಿಗೂ ಸೋಂಕು ತಗಲಿದೆ.
ಪ್ರಸ್ತುತ ೧೩ ಮಂದಿ ವೈದ್ಯಕೀಯ ಸಿಬ್ಬಂದಿಯಲ್ಲಿ ಬಹುತೇಕರು ಎರಡನೇ ಡೋಸ್ ಲಸಿಕೆ ಪಡೆದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿತರನ್ನು ಪ್ರತ್ಯೇಕ ಹಾಸ್ಟೆಲ್ ಕೋಣೆಗಳಲ್ಲಿ ಇರಿಸಲಾಗಿದ್ದು, ಸೋಂಕಿಗೆ ತುತ್ತಾಗಿರುವ ಈ ೧೩ ಸಿಬ್ಬಂದಿಯ ಯಾವುದೇ ಇತಿಹಾಸ ತಿಳಿದಿಲ್ಲ. ಬಿಎಂಸಿಆರ್‌ಐನ ಕೋವಿಡ್-೧೯ ನೋಡೆಲ್ ಅಧಿಕಾರಿ ಡಾ. ಸ್ಮಿತಾ ಸೆಗು ತಿಳಿಸಿದ್ದಾರೆ. ಆದರೆ ಸೋಂಕು ತಗುಲಿದ್ದು ಹೇಗೆ ಎಂಬುದು ಸಂಶಯಕ್ಕೇಡೆ ಮಾಡಿಕೊಟ್ಟಿದೆ.
ಆರಂಭದಲ್ಲಿ ಎಂಬಿಬಿಎಸ್‌ನ ಕೆಲ ವಿದ್ಯಾರ್ಥಿಗಳಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು, ತಕ್ಷಣ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಆದರೆ ತೀವ್ರತೆ ಕಡಿಮೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ ೨ನೆ ಡೋಸ್ ಪಡೆದ ಜಯದೇವ ಹೃದ್ರೋಗ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದರು, ಈ ಕುರಿತ ಮಾಹಿತಿ ನೀಡಿರುವ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ವಿ.ಎನ್ ಮಂಜುನಾಥ್, ೧೪ ದಿನಗಳ ಹಿಂದೆ ಇಬ್ಬರು ದಾದಿಯರು ಲಸಿಕೆ ಪಡೆದ ನಂತರ ಸೋಂಕು ಕಾಣಿಸಿಕೊಂಡಿದೆ. ಆದರೆ ಸೋಂಕಿನ ತೀವ್ರತೆ ಇರಲಿಲ್ಲ ಎಂದರು.