ಬಿಎಂಟಿಸಿ ಬಸ್‌ನಲ್ಲಿ ರಾಹುಲ್ ಸಂಚಾರ

ಬೆಂಗಳೂರು,ಮೇ.೮-ಕಾಂಗ್ರೆಸ್ ಅಭ್ಯಥಿಗಳ ಪರ ಪ್ರಚಾರ ನಡೆಸಲು ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಸಾಮಾನ್ಯ ನಾಗರಿಕರಂತೆ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಿ ಗಮನ ಸೆಳೆದರು.
ನಿನ್ನೆಯಷ್ಟೇ ಫುಡ್ ಡೆಲವರಿ ಬಾಯ್ ಜೊತೆ ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನಲ್ಲಿ ಸಂಚರಿಸಿದ್ದರು. ಇಂದು ಬೆಳಿಗ್ಗೆ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಿದ್ದು ವಿಶೇಷವಾಗಿತ್ತು.
ಕನ್ನಿಂಗ್‌ಹ್ಯಾಮ್ ರಸ್ತೆಯಿಂದ ರಾಮಮೂರ್ತಿ ನಗರದ ಕಡೆಗೆ ಸಂಚರಿಸುತ್ತಿದ್ದ ಬಸ್‌ನಲ್ಲಿ ರಾಹುಲ್ ಪ್ರಯಾಣಿಸಿದರು. ಈ ವೇಳೆ ಪ್ರಯಾಣಿಕರೊಂದಿಗೆ ಸಂವಾದ ನಡೆಸಿ ೬ ಕಿ.ಮೀ ವರೆಗೂ ಬಸ್‌ನಲ್ಲೇ ಸಂಚರಿಸಿದರು.
ಮೇ ೧೦ ರಂದು ಮತದಾನ ನಡೆಯಲಿದ್ದು, ಇಂದು ಸಂಜೆ ೬ ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ಸಾಮಾನ್ಯ ನಾಗರಿಕರಂತೆ ಬಸ್‌ನಲ್ಲಿ ಪ್ರಯಾಣ ಮಾಡಿ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ರಾಹುಲ್ ಗಾಂಧಿಯವರು ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫುಡ್ ಡೆಲವರಿ ಬಾಯ್ ಜೊತೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ ನಂತರ ಫುಡ್ ಡೆಲವರಿ ಬಾಯ್‌ಗಳ ಜೊತೆ ಸಂವಾದ ನಡೆಸಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.

ಲವ್ ಯು ಎಂದ ರಾಗಾ
ಬಸ್ ಸ್ಟಾಪ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯರು ರಾಹುಲ್ ಗಾಂಧಿಯವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈ ವೇಳೆ ರಾಹುಲ್ ಗಾಂಧಿ ಓರ್ವ ಯುವತಿಗೆ ಲವ್ ಯು ಎಂದಿದ್ದಾರೆ. ರಾಹುಲ್ ಗಾಂಧಿಯ ಸರಳತೆಗೆ ಜನರು ಫಿದಾ ಆಗಿದ್ದಾರೆ. ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ರಾಗಾ ಪ್ರಚಾರ ನಡೆಸಿದರು.