
ಬೆಂಗಳೂರು,ಮಾ.೧೦-ನಿಲ್ಲಿಸಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ ಗೆ ಆಕಸ್ಮಿಕ ಅಗ್ನಿ ಬೆಂಕಿ ಹೊತ್ತಿಕೊಂಡು ಒಳಗೆ ಮಲಗಿದ್ದ ನಿರ್ವಾಹಕರೊಬ್ಬರು ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಇಂದು ನಸುಕಿನಲ್ಲಿ ಬ್ಯಾಡರಹಳ್ಳಿಯ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.ಬಳ್ಳಾರಿ ಮೂಲದ ಮುತ್ತಯ್ಯ ಸ್ವಾಮಿ (೪೫) ಸಜೀವ ದಹನವಾದ ನಿರ್ವಾಹಕಎಂದು ಗುರುತಿಸಲಾಗಿದೆ. ಚಾಲಕ ಪ್ರಕಾಶ್ ಎಂದಿನಂತೆ ಬಿಎಂಟಿಸಿ ಕೊಟ್ಟಿರುವ ಕೊಠಡಿಯಲ್ಲಿ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆಕಸ್ಮಿಕ ಬೆಂಕಿಯಿಂದ ಇಡೀ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಲಿಂಗಧೀರನಹಳ್ಳಿ ಡಿ ಗ್ರೂಪ್ ಲೇಔಟ್ ಬಸ್ ನಿಲ್ದಾಣದಲ್ಲಿ ತಡರಾತ್ರಿ ಸುಮ್ಮನಹಳ್ಳಿ ಡಿಪೋಗೆ ಸೇರಿದ್ದ ಕೆಎ ೫೭ ಎಫ್ ೨೦೬೯ ನಂಬರಿನ ಬಿಎಂಟಿಸಿ ಬಸ್ ನಿಲ್ಲಿಸಲಾಗಿತ್ತು. ಬಸ್‌ನಲ್ಲಿ ನಿರ್ವಾಹಕ ಮುತ್ತಯ್ಯ ಮಲಗಿದ್ದರು.ಮುಂಜಾನೆ ೪ ಗಂಟೆ ವೇಳೆಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಇಡೀ ಬಸ್‌ಗೆ ಬೆಂಕಿ ಆವರಿಸಿದ್ದು, ಅಗ್ನಿಯ ಕೆನ್ನಾಲಿಗೆಗೆ ಬಸ್‌ನೊಳಗಿದ್ದ ಮುತ್ತಯ್ಯ ಬಲಿಯಾಗಿದ್ದಾರೆ.
ಹಲವು ಶಂಕೆ ತನಿಖೆ:
ಈ ಘಟನೆ ನಿಜಕ್ಕೂ ಆಕಸ್ಮಿಕವೋ ಅಥವಾ ಕೊಲೆಯೋ ಎನ್ನುವ ಪ್ರಶ್ನೆ ಎದ್ದುಕೊಂಡಿದೆ. ಬಸ್ಸಿನ ಚಾಲಕ ಪ್ರಕಾಶ್ ಎಂದಿನಂತೆ ಬಿಎಂಟಿಸಿಯ ಕೊಠಡಿಯಲ್ಲಿ ಮಲಗಿದ್ದಾರೆ. ಆದರೆ, ಕಂಡಕ್ಟರ್ ಮುತ್ತಯ್ಯ ಸ್ವಾಮಿ ಬಸ್‌ನಲ್ಲೇ ಮಲಗಿದ್ದಾರೆ. ಈ ವೇಳೆ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಬಸ್ಸ್ ವ್ಯಾಪಿಸಿ ಹೊಗೆ ತುಂಬಿದೆ.ಆದರೆ ಗಾಢನಿದ್ರೆಗೆ ಜಾರಿದ್ದ ಮುತ್ತಯ್ಯಸ್ವಾಮಿ ಉಸಿರಾಟದ ಸಮಸ್ಯೆಯಿಂದ ಪ್ರಜ್ಞಾಹೀನ ಸ್ಥಿತಿಯನ್ನು ತಲುಪಿ ಬಸ್‌ನಲ್ಲೇ ಸುಟ್ಟುಕರಕಲಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸಿಕೊಂಡಿದೆ.
ಇದೀಗ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ದೌಡಾಯಿಸಿದ್ದಾರೆ. ಅದೇ ರೀತಿ ಬೆಂಕಿಹೊತ್ತಿಕೊಳ್ಳಲು ಕಾರಣವಾದ ಅಂಶವೇನು ಅನ್ನುವುದನ್ನು ಅಗ್ನಿಶಾಮಕ ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಇಂದು ಬೆಳಿಗ್ಗೆ ೫ ಗಂಟೆಗೆ ಈ ಬಸ್ಸು ಲಿಂಗಧೀರನಹಳ್ಳಿಯಿಂದ ಈ ಬಸ್ ಕೆ.ಆರ್ ಮಾರ್ಕೆಟ್ ಗೆ ತೆರಳಬೇಕಿತ್ತು. ಇಷ್ಟು ದಿನ ಮೆಜೆಸ್ಟಿಕ್‌ಗೆ ತೆರಳುತ್ತಿದ್ದ ಬಸ್ಸು ಇಂದು ದಿನದ ಮಟ್ಟಿಗೆ ಮಾರ್ಕೆಟ್‌ಗೆ ರೂಟ್ ಬದಲಿಸಲಾಗಿತ್ತು.
ಅನುಮಾನದ ಹುತ್ತ:
ರಾತ್ರಿ ೧೦:೩೦ ಕ್ಕೆ ಲಿಂಗಧೀರನಹಳ್ಳಿ ಬಸ್ ನಿಲ್ದಾಣ ಬಸ್ ಪ್ರವೇಶಿಸಿದ್ದು ಮುಂಜಾನೆ ೩ ರಿಂದ ೪ವರೆಗೆ ಬಸ್ ನಿಂತಿದ್ದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಆಗುವುದು ತುಂಬಾ ಕಡಿಮೆ. ಒಂದು ವೇಳೆ ಶಾರ್ಟ್ ಸರ್ಕ್ಯೂಟ್ ಆದರೂ ಕೂಡ ಬೆಂಕಿ ನಿಧಾನವಾಗಿಯೇ ಹತ್ತಿಕೊಳ್ಳುತ್ತದೆ.ಯಾವುದೇ ವ್ಯಕ್ತಿ ಮಲಗಿದ್ದರೂ ಹೊಗೆಯಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಹೀಗೆ ಉಸಿರಾಟದ ಸಮಸ್ಯೆ ಕಂಡುಬಂದಾಗ ಸಹಜವಾಗಿ ಎಚ್ಚರವಾಗುತ್ತಾರೆ. ಆದರೆ ಇಲ್ಲಿ ಬಿಎಂಟಿಸಿ ಕಂಡಕ್ಟರ್ ಮುತ್ತಯ್ಯ ಮಾತ್ರ ಮಲಗಿದ್ದಲ್ಲೇ ಮಲಗಿದ್ದಾರೆ. ಹಾಗಾದರೆ ಯಾರೋ ಕೊಲೆಮಾಡಿ ಬಸ್ಸಿಗೆ ಬೆಂಕಿ ಹಚ್ಚಿದ್ದಾರಾ ಎನ್ನುವ ಅನುಮಾನ ಹುಟ್ಟು ಹಾಕಿದೆ.
ಈ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ತಕ್ಷಣ ಸಾವಿನ ಅಸಲೀ ಸತ್ಯ ಹೊರಬೀಳಲಿದೆ. ಅದೇ ರೀತಿ ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ಕಾರಣ ತಿಳಿದುಬರಲಿದೆ.
ಬಸ್ ಎಷ್ಟು ಸುರಕ್ಷಿತ:
ಇಂತಹ ಅನಿರೀಕ್ಷಿತ ಘಟನೆಗಳಿಂದ ಚಾಲಕ ಮತ್ತು ನಿರ್ವಾಹಕರಿಗೆ ಬಿಎಂಟಿಸಿ ಬಸ್ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಉದ್ಭವವಾಗಿದೆ. ಪ್ರತಿನಿತ್ಯ ಪ್ರಯಾಣಿಕರ ಸೇವೆ ಮುಗಿಸಿ ನೂರಾರು ಮಂದಿ ಚಾಲಕರು, ನಿರ್ವಾಹಕರು ಬಸ್‌ನಲ್ಲಿಯೇ ರಾತ್ರಿ ತಂಗುತ್ತಾರೆ. ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ಖರೀದಿಸಿರುವ ಬಸ್‌ಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತಿರುವುದರಿಂದ ನಿಗಮ ಬಸ್‌ಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲವೇ ಎಂಬ ಅನುಮಾನ ಕಾಡಲಾರಂಭಿಸಿದೆ.