ಬಿಎಂಟಿಸಿ ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ

ಬೆಂಗಳೂರು, ಜೂ,೭-ಕೊರೊನಾ ಸೋಂಕು ತಡೆಗೆ ವಿಧಿಸಲಾಗಿರುವ ಲಾಕ್‌ಡೌನ್ ತೆರವು ಮಾಡಿದ ಬಳಿಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಜೀಬಿಗೆ ಕತ್ತರಿ ಹಾಕಲು ತೀರ್ಮಾನಿಸಿದೆ.
ಒಂದು ವರ್ಷದಲ್ಲಿ ೨೫ ರೂ ಡೀಸೆಲ್ ದರ ಹೆಚ್ಚಳವಾಗಿದೆ. ಈ ನಷ್ಟವನ್ನು ಸರಿದೂಗಿಸಲು ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಮಾಡಲು ಸಂಸ್ಥೆ ಗಂಭೀರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅನ್‌ಲಾಕ್ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿದೆ. ಇದರ ಬೆನ್ನಲ್ಲೆ ಬಿಎಂಟಸಿ ಪ್ರಯಾಣಿಕರ ದರವನ್ನು ಶೇ.೧೮ರಿಂದ ೨೦ ರಷ್ಟು ಹೆಚ್ಚಳ ಮಾಡುವಂತೆ ಬಿಎಂಟಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಈ ಹಿಂದೆ ಮುಂಗಡಪತ್ರ ಮಂಡಿಸುವ ಸಂದರ್ಭದಲ್ಲಿ ಬಿಎಂಟಿಸಿ ಬಸ್ ದರ ಹೆಚ್ಚಿಸುವಂತೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿತ್ತು.ಆದರೆ ಡೀಸೆಲ್ ದರ ಈಗ ಮತ್ತೆ ಗಗನಕ್ಕೇರಿದೆ. ಕಳೆದ ವರ್ಷ ಪ್ರತಿ ಲೀಟರ್ ಡೀಸೆಲ್ ದರ ೬೫ ರೂಪಾಯಿಯಷ್ಟಿತ್ತು. ಆದರೆ ಈ ವರ್ಷ ಪೆಟ್ರೋಲ್ ದರ ಪ್ರತಿ ಲೀಟರ್ ಜೂನ್ ತಿಂಗಳಲ್ಲಿ ೯೧.೧೮ ಪೈಸೆಯಷ್ಟು ಹೆಚ್ಚಳವಾಗಿದೆ.
ಕೊರೊನಾ ಸೋಂಕಿನಿಂದಾಗಿ ಬಿಎಂಟಿಸಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಂಸ್ಥೆ ಈಗಾಗಲೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದು, ಇದರ ಜತೆಗೆ ಡೀಸೆಲ್ ದರ ಗಗನಕ್ಕೇರಿದ್ದು ಸಂಸ್ಥೆ ಇನ್ನಷ್ಟು ನಷ್ಟ ಅನುಭವಿಸುತ್ತಿದೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.
ಬೇಡಿಕೆಗಳ ಈಡೇರಿಕೆಗಾಗಿ ಬಿಎಂಟಿಸಿ ನೌಕರರು ಮುಷ್ಕರ ನಡೆಸಿದ್ದರಿಂದ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಪ್ರಯಾಣದ ದರ ಏರಿಕೆಗೆ ಸರ್ಕಾರ ಹಸಿರು ನಿಶಾನೆ ತೋರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಈಗಾಗಲೇ ಕೊರೊನಾ ಸೋಂಕು ತಡೆಯಲು ರಾಜ್ಯಾದ್ಯಂತ ಈ ತಿಂಗಳ ೧೪ರ ವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಮಧ್ಯಮ ಹಾಗೂ ಬಡವರು ಕೆಲಸವಿಲ್ಲದೆ ಕಂಗಲಾಗಿದ್ದಾರೆ.
ಈಗಾಗಲೇ ಡೀಸೆಲ್ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳು ದುಬಾರಿಯಾಗಿದ್ದು ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದರ ಬೆನ್ನಲ್ಲೇ ಬಿಎಂಟಿಸಿ ದರ ಹಚ್ಚಳ ಮಾಡಿದರೆ ಜನರಿಗೆ ಇನ್ನಷ್ಟು ಹೊರೆಯಾಗಲಿದೆ ಎಂಬ ಆತಂಕ ಎದುರಾಗಿದೆ.
ಡೀಸೆಲ್ ದರ ಏರಿಕೆಯಿಂದಾಗಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯು ನಷ್ಟದಲ್ಲಿದೆ ಆದರೆ ಟಿಕೆಟ್ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾಪ ಸಂಸ್ಥೆಯ ಮುಂದೆ ಇಲ್ಲ ಎಂದು ಮೂಲಗಳು ತಿಳಿಸಿವೆ.