ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ ಗೋಡೆಗೆ ಗುದ್ದಿ ಮಧ್ಯೆ ಸಿಲುಕಿ ಕಂಡಕ್ಟರ್‌ ಸ್ಥಳದಲ್ಲೇ ಸಾವು

ಬೆಂಗಳೂರು, ಮೇ.9- ಯಲಹಂಕ ನಾಲ್ಕನೇ ಹಂತದ ಬಸ್‌ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ ಕಟ್ಟಡಕ್ಕೆ ಗುದ್ದಿ ಬಸ್‌ ಮತ್ತು ಗೋಡೆಯ ಮಧ್ಯೆ ಸಿಲುಕಿ ಕಂಡಕ್ಟರ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ
ಇನ್ನು ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ ಗುದ್ದಿದ ರಭಸಕ್ಕೆ ಬಸ್‌ ನಿಲ್ದಾಣದ ಬಳಿ ಇದ್ದ ಕಟ್ಟಡದ ಗೋಡೆ ಬಿದ್ದಿದೆ.
ಬಿಎಂಟಿಸಿ ಬಸ್‌ನ ಚಾಲಕನ ಕಂಟ್ರೋಲ್ ತಪ್ಪಿದ ಬಸ್‌ ಸೀದಾ ಹೋಗಿ ಕಂಡಕ್ಟರ್ ಡಿಕ್ಕಿ ಹೊಡೆದಿದೆ. ಸೋಮಪ್ಪ ಮೃತ ಕಂಡಕ್ಟರ್ ಎಂದು ಗುರುತಿಸಲಾಗಿದೆ. ಯಲಹಂಕ ನಾಲ್ಕನೇ ಹಂತದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಸ್‌ ನಿಲ್ದಾಣದಲ್ಲಿ ಟಿಕೆಟ್‌ ಕಲೆಕ್ಟರ್‌ಗೆ ಬಸ್ ಟಿಕೇಟ್ ಹಣದ ಸಂಗ್ರಹಣೆ ಬಗ್ಗೆ ಲೆಕ್ಕನೀಡಿ ವಾಪಾಸ್ ಆಗುತ್ತಿದ್ದ ವೇಳೆ ಘಟನೆ ನಡೆದಿದೆ.
ಬಸ್‌ ಹತ್ತಲು ಹೋಗುವಾಗ ಚಾಲಕ ಕೂಡ ಬಸ್‌ ಚಾಲನೆಯಲ್ಲಿ ಇಟ್ಟುಕೊಂಡಿದ್ದನು. ಕಂಡಕ್ಟರ್‌ ಬಸ್‌ ಬಳಿ ಬಂದಾಗ ಚಾಲನೆಯಲ್ಲಿದ್ದ ಬಸ್‌ ಕಂಡಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಆಗ ಬ್ರೇಕ್‌ ಹಾಕುವ ಬದಲು ಚಾಲಕ ಆಘಾತಕ್ಕೆ ಒಳಗಾಗಿ ಬಸ್‌ ನಿಯಂತ್ರಣ ಕಳೆದುಕೊಂಡಿದ್ದಾನೆ. ನಂತರ ಕಂಡಕ್ಟರ್‌ನನ್ನು ಕಟ್ಟಡದ ಗೋಡೆಗೆ ಅಪ್ಪಚ್ಚಿ ಆಗುವಂತೆ ಮಾಡಿದೆ. ಡಿಕ್ಕಿಯ ರಭಸಕ್ಕೆ ಕಂಡಕ್ಟರ್‌ನ ದೇಹದ ಅಂಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ತಕ್ಷಣವೇ ಯಲಹಂಕ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿದ ಪರಿಶೀಲನೆ ನಡೆಸಿದ್ದಾರೆ. ಸುತ್ತಲೂ ಬ್ಯಾರಿಕೇಡ್‌ ಹಾಕಿದ್ದು, ಸಾರ್ವಜನಿಕರು ಘಟನೆ ಸ್ಥಳಕ್ಕೆ ಬರದಂತೆ ತಡೆಗಟ್ಟಿದ್ದಾರೆ. ಪೊಲೀಸರು ಮೃತ ದೇಹದ ಭಾಗಗಳನ್ನು ಒಗ್ಗೂಡಿಸಿಕೊಂಡು ಆಸ್ಪತ್ರೆಗೆ ರವಾನಿಸಲು ಆಸ್ಪತ್ರೆ ಸಿಬ್ಬಂದಿಗೆ ನೆರವಾಗಿದ್ದಾರೆ.
 ಬಿಎಂಟಿಸಿ ಡಿಪೋ- 30 ಯಲಹಂಕಕ್ಕೆ ಸೇರಿದ ಎಲೆಕ್ಟ್ರಿಕ್ ಬಸ್‌ ಅಪಘಾತವಾಗಿದೆ. ಎಲೆಕ್ಟ್ರಿಕ್ ಬಸ್ ಸಂಖ್ಯೆ- ಕೆಎ- 51ಎಹೆಚ್ 2558 ಆಗಿದ್ದು, ಇದಕ್ಕೆ ಖಾಸಗಿ ಚಾಲಕನನ್ನು ನಿಯೋಜನೆ ಮಾಡಿಕೊಳ್ಳಲಾಗಿತ್ತು.