ಬಿಎಂಟಿಸಿಯ ವೋಲ್ವೋ ಬಸ್‌ನಲ್ಲಿಶಂಕಿತನ ಸಂಚಾರ

ಬೆಂಗಳೂರು,ಮಾ.೨- ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ್ದ ಶಂಕಿತ ವ್ಯಕ್ತಿಯು ಸಾಮಾನ್ಯರಂತೆ ಬಿಎಂಟಿಸಿ ಬಸ್‌ನಲ್ಲಿ ಬಂದಿದ್ದು,ಆತ ಸಂಚರಿಸಿದ ಬಸ್ ರೂಟ್ ಸಂಖ್ಯೆಯ ಜಾಡು ಹಿಡಿದ ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಬಾಂಬ್ ಇಟ್ಟಿದ್ದ ವ್ಯಕ್ತಿ ಬಿಎಂಟಿಸಿಯ ವೋಲ್ವೋ ಬಸ್‌ನಲ್ಲಿ ಪ್ರಯಾಣ ಮಾಡಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಬಿಎಂಟಿಸಿಯ ವೋಲ್ವೋ ಬಸ್‌ನಲ್ಲಿ ಶಂಕಿತ ವ್ಯಕ್ತಿಯು ಪ್ರಯಾಣ ಮಾಡಿದ ದೃಶ್ಯಾವಳಿಯನ್ನೆಲ್ಲ ನಿಗಮವು ಪೊಲೀಸರಿಗೆ ಒಪ್ಪಿಸಿದೆ. ಬಾಂಬ್ ಇರುವ ಬ್ಯಾಗ್ ಹಿಡಿದು ಬಸ್‌ನಲ್ಲೇ ಬಂದಿದ್ದ ಶಂಕಿತ ವ್ಯಕ್ತಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಮತ್ತೆ ವಾಪಸ್ ವೋಲ್ವೋ ಬಸ್‌ನಲ್ಲಿ ಹೋಗಿದ್ದಾನೆ.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿ ಶಂಕಿತ ವ್ಯಕ್ತಿ ಬಿಎಂಟಿಸಿ ಬಸ್ಸಿನಲ್ಲಿ ಓಡಾಡಿದ್ದಾನೆ. ಬಸ್‌ನಿಂದ ಇಳಿದು ಹೋದ ಕುರಿತು ಅಧಿಕಾರಿಗಳು ಮಾಹಿತಿ ಕೇಳಿದ್ದರು. ಹೀಗಾಗಿ ಎಲ್ಲ ಸಿಸಿಟಿವಿ ಫೋಟೆಜ್‌ಗಳನ್ನು ಕೊಟ್ಟಿದ್ದೇವೆ. ನಾವು ಕೊಟ್ಟ ಮಾಹಿತಿ ಮೇಲೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಇದರ ಹೊರತಾಗಿ ತನಿಖೆಯಲ್ಲಿ ಮೂಗು ತೂರಿಸಲು ಹೋಗಲ್ಲ ಎಂದು ತಿಳಿಸಿದ್ದಾರೆ.
ವೋಲ್ವೋ ಬಸ್ ಡಿಪೋ ೨೫ಕ್ಕೆ ಸೇರಿದ್ದು, ರೂಟ್ ನಂಬರ್ ೫೦೦ ಎಫ್ ಐಟಿಪಿಎಲ್, ಹೆಚ್‌ಎಸ್‌ಆರ್ ಲೇಔಟ್ ನಡುವೆ ಸಂಚಾರ ಮಾಡುವ ಬಸ್ ಇದಾಗಿದ್ದು ಅದರಲ್ಲಿ ಶಂಕಿತ ಸಂಚಾರ ಮಾಡಿರುವುದು ಖಚಿತವಾಗಿದೆ. ನಿನ್ನೆ ಬೆಳಗ್ಗೆ ಸಮಯ ೧೧:೫೦:೪೫ ಬಂದಿದ್ದ ಬಸ್‌ನಲ್ಲಿ ಶಂಕಿತ ಸಂಚರಿಸಿದ್ದಾನೆ. ವೋಲ್ವೋ ಬಸ್‌ನಲ್ಲಿ ವಿಡಿಯೋ ರೆಕಾರ್ಡ್ ಆಗಿದೆ. ಐಟಿಪಿಎಲ್ ಹಾಗೂ ಹೂಡಿ ಭಾಗಕ್ಕೆ ಸಂಚಾರ ಮಾಡಿದ್ದಾನೆ.