ಬಿಎಂಎಸ್ ಟ್ರಸ್ಟ್‌ನ ಸ್ವತ್ತು ಮುಟ್ಟುಗೋಲಿಗೆ ಹೆಚ್‌ಡಿಕೆ ಆಗ್ರಹ

ಬೆಂಗಳೂರು,ಸೆ.೨೩- ಬಿಎಂಎಸ್ ಟ್ರಸ್ಟ್‌ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು. ಈ ಅಕ್ರಮದ ನೈತಿಕಹೊಣೆ ಹೊತ್ತು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಟ್ರಸ್ಟ್ ಮತ್ತು ಟ್ರಸ್ಟಿನ ಎಲ್ಲ ಸ್ವತ್ತುಗಳನ್ನು ರಾಜ್ಯಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸರಣಿ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.ನಿನ್ನೆ ವಿಧಾನಸಭೆಯಲ್ಲಿ ಬಿಎಂಎಸ್‌ನ ಅಕ್ರಮ ಕುರಿತಂತೆ ದಾಖಲೆ ಸಮೇತ ಬಹಿರಂಗಪಡಿಸಿದ್ದೇನೆ. ಈ ದಾಖಲೆಗಳೇ ಎಲ್ಲವನ್ನೂ ಮಾತನಾಡುತ್ತಿದೆ. ನಾನು ಹೊಡೆದ ಗುಂಡು ಎಲ್ಲಿ ವಿಫಲವಾಗಿದೆ. ಅದನ್ನು ವಿಫಲಗೊಳಿಸುವ ಷಡ್ಯಂತ್ರ ಈಗ ನಡೆದಿದೆ ಎಂದು ಹೇಳಿದರು.ಬಿಎಂಎಸ್ ಟ್ರಸ್ಟ್ ಕುರಿತಂತೆ ಕಾನೂನು ರೀತಿ ಕ್ರಮಕೈಗೊಂಡಿರುವುದಾಗಿ ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತನ್ನು ಸದ್ದಿಲ್ಲದೆ ಖಾಸಗಿ ರಿಯಲ್ ಎಸ್ಟೇಟ್ ಪಟ್ಟಭದ್ರರಿಗೆ ಧಾರೆ ಎರೆದುಕೊಡುವುದಾ ಸಚಿವರೇ? ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.ಸದನದಲ್ಲಿ ತಾವು ಬಹಿರಂಗಪಡಿಸಿರುವ ಪ್ರತಿ ದಾಖಲೆ ಅಕ್ರಮಕ್ಕೆ ಹಿಡಿದ ಕನ್ನಡಿಯಾಗಿದೆ. ನಿಮ್ಮ ಕಣ್ಣಿಗೆ ಈ ಅಕ್ರಮವೆಲ್ಲ ಸಕ್ರಮವಾಗಿದ್ದರೆ ಇದಕ್ಕಂತ ದುರಂತ ಬೇರೊಂದಿಲ್ಲ. ಎಲ್ಲ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಈ ಆಸ್ತಿಯನ್ನು ಲಪಟಾಯಿಸಲು ನಡೆದ ಷಡ್ಯಂತ್ರಕ್ಕೆ ಸಚಿವರಾಗಿ ಸಹಕಾರ ನೀಡಿರುವುದು ಜಗಜ್ಜಾಹೀರಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
೧೯೫೭ರಲ್ಲೇ ಬಿಎಂಎಸ್ ಟ್ರಸ್ಟ್ ನೋಂದಣಿಯಾದ ಮೂಲ ಡೀಡ್‌ನ್ನು ಒಮ್ಮೆ ಓದುವಂತೆ ಸಲಹೆ ಮಾಡಿರುವ ಅವರು, ದಾನಿ ಟ್ರಸ್ಟಿ, ಆಜೀವ ಟ್ರಸ್ಟಿ ನೇಮಕದ ಬಗ್ಗೆ ಇರುವ ಷರತ್ತುಗಳನ್ನೂ ತಿಳಿಯಿರಿ. ಆದರೆ, ನೀವು ಜನರಿಗೆ ಮತ್ತು ಸರ್ಕಾರಕ್ಕೆ ಸೇರಿರುವ ಇಡೀ ಟ್ರಸ್ಟಿನ ಪರ ಆಸ್ತಿ ಕಬಳಿಸಲು ನಿಂತವರ ಪರ ನಾಚಿಕೆಯಿಲ್ಲದೆ ವಕಾಲತ್ತು ವಹಿಸುತ್ತಿದ್ದೀರಿ ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
೨೦೧೮ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಹಿನ್ನೆಲೆಯಲ್ಲಿ ದಾನಿ ಟ್ರಸ್ಟಿ, ಆಜೀವ ಟ್ರಸ್ಟಿ ನೇಮಕದ ಬಗ್ಗೆ ಬಿಎಂಎಸ್ ಟ್ರಸ್ಟಿನಲ್ಲಿ ಕೈಗೊಂಡಿದ್ದ ತಿದ್ದುಪಡಿಗಳು ಅಕ್ರಮವಾಗಿವೆ. ಆ ತಿದ್ದುಪಡಿಗಳನ್ನು ಸರ್ಕಾರ ತಿರಸ್ಕರಿಸಿತ್ತು. ತಮ್ಮ ಸರ್ಕಾರ ಪಥನಗೊಂಡ ಬಳಿಕ ಬಿಜೆಪಿ ಸರ್ಕಾರ ಈ ಅಕ್ರಮ ತಿದ್ದುಪಡಿಗಳನ್ನು ತ್ವರಿತವಾಗಿ ಪುರಸ್ಕರಿಸಿದ್ದು ಹೇಗೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.