
ರಾಯಚೂರು,ಜು.೯- ಜಾಲಹಳ್ಳಿ ಜೆ.ಜೆ ಅನುದಾನಿತ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ್ ಮೇಲೆ ನಡೆದ ಘಟನೆ ಯಾವುದೇ ಜಾತಿ ಧರ್ಮದ ನಡುವೆ ಪ್ರಕರಣ ಅಲ್ಲವೆಂದು ಎಸ್.ಎಫ್ .ಐ ಜಿಲ್ಲಾಧ್ಯಕ್ಷ ರಮೇಶ ಮೀರಾಪೂರು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ಪ್ರಕರಣದ ಆರೋಪಿಗಳಾದ ಶರಣು ಹುಣಸಗಿ ಹಾಗೂ ಬಸವರಾಜ ಪಾಟೀಲ್ ಗಾಣದಾಳ ಇವರು ಜಾಲಹಳ್ಳಿ ಮತ್ತು ಗಾಣದಾಳ ಗ್ರಾಮಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.ಜಾಲಹಳ್ಳಿ ಭಾಗ್ಯವಂತಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚುವರಿ ಪಾಲಕರಿಂದ ಹಣ ವಸೂಲಿ ಮಾಡುತ್ತಿರುವ ಕುರಿತು ಹಾಗೂ ಎಸ್ ಎಸ್ ಎಲ್ ಸಿ, ಮತ್ತು ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಂದ ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಿರುವುದು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆ ನಡೆಸುವವರು ಮತಿಯ ಕೋಮು ಭಾವನೆ ಪ್ರಚೋದಿಸುವಂತ ಕಾರ್ಯಕ್ರಮಗಳನ್ನು ಮಾಡಿದ್ದು, ಕೆಲ ಪಾಲಕರಿಂದ ದೂರು ಕೇಳಿಬಂದಿತ್ತು. ಈ ದೂರಿಗೆ ಸಂಬಂಧಿಸಿದಂತೆ ನಮ್ಮ ಸಂಘಟನೆ ಮತ್ತು ಯುವಜನ ಸಂಘಟನೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದು, ಇದರ ಇನ್ನಲ್ಲಿ ಖಾಸಗಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ತನಿಖೆಗೆ ಬಂದಿದ್ದು, ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಶರಣು ಹುಣಸಗಿ ತಪ್ಪು ಒಪ್ಪಿಕೊಂಡು ಲಿಖಿತ ರೂಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬರೆದು ಕೊಟ್ಟಿದ್ದಾರೆ.
ಸರ್ಕಾರ ನಿಗದಿ ಪಡಿಸಿದ ಶುಲ್ಕಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ತನಿಖೆಯಲ್ಲಿ ಸಾಬೀತಾಗಿದೆ.ಅಧಿಕಾರಿಗಳಿಂದ ಭಾಗ್ಯವಂತಿ ಶಾಲೆಯ ಮೇಲೆ ಮೂರು ನೋಟಿಸ್ ಜಾರಿ ಆಗಿ ಶಿಸ್ತು ಕ್ರಮಕ್ಕಾಗಿ ಅದೇಶ ಹೊರಡಿಸಿದ್ದಾರೆ. ಇಲಾಖೆಯ ನೊಟೀಸ್ ಗೆ ಉತ್ತರಸದ ಶರಣು ಹುಣರಗಿ ಅವರು ಇಲಾಖೆ ವಿರುದ್ಧ ಉದ್ಘಟಿತ ತೋರಿಸಿದ್ದಾರೆ ಎಂದು ಆರೋಪಿಸಿದರು.
ಜೂನ್ ೨೩ ರಂದು ಜೆ.ಜೆ. ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವಾದ ನಲಿಕಲಿ ಮತ್ತು ಬಿಸಿಯೂಟ ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಶರಣು ಹುಣಸಗಿ ಬಸವರಾಜ ಪಾಟೀಲ್ ಗಾಣದಾಳ ಇವರು ಪುಡಿ ರೌಡಿಗಳಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಜಾಲಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಪ್ರಕರಣದಲ್ಲಿ ಒಬ್ಬ ಆರೋಪಿ ಬಂಧನವಾಗಿದ್ದು, ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡು ತಮ್ಮ ಬೆಂಬಲಿಗರ ಅಧಿಕಾರದ ಪ್ರಭಾವದಿಂದ ‘ಭೂಗತವಾಗಿದ್ದುಕೊಂಡು ಈ ಪ್ರಕರಣದ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಹಾಗೂ ಸಮುದಾಯಗಳ ಮಧ್ಯೆ ಸಂಘರ್ಷ ಉಂಟು ಮಾಡಿ ಸಮಾಜದಲ್ಲಿ ಶಾಂತಿ ಭಂಗ ಮಾಡಲು ಹೊರಟಿದ್ದಾರೆ.ಪ್ರಕರಣ ದಾಖಲಾಗಿ ೧೫ ದಿನ ಕಳೆದರೂ ಇಲ್ಲಿಯವರೆಗೂ ಇನ್ನೋರ್ವ ಆರೋಪಿಯನ್ನು ಬಂಧಿಸದ ಆರೋಪಿ ಬಸವರಾಜ ಗಾಣದಾಳಗೆ ಬೆಂಬಲವಾಗಿ ನಿಂತಿದ್ದಾರೆಯೇ ಎಂದು ಪೋಲಿಸ್ ಇಲಾಖೆಯ ಮೇಲೆ ಅನುಮಾನ ಹುಟ್ಟುತ್ತಿದೆ, ಕೂಡಲೇ ಇವರನ್ನು ಬಂಧಿಸಿ ಗಡಿಪಾರು ಮಾಡಬೇಕು.ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಸಂಘಟನೆ ನೇತೃತ್ವದಲ್ಲಿ ಜಿಲ್ಲಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶಿವಕುಮಾರ ಮ್ಯಗಳಮನಿ,ಮೌನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.