ಬಿಇಒ ಪುರುಷೋತ್ತಮರೆಡ್ಡಿರಿಗೆ ಬೀಳ್ಕೊಡುಗೆ

ಕೋಲಾರ,ಅ,೧೭:ಮುಳಬಾಗಿಲು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಡಳಿತವನ್ನು ಸುಧಾರಣೆಯ ಹಂತಕ್ಕೆ ತರುವಲ್ಲಿ ಶ್ರಮಿಸಿ ಎಲ್ಲಾ ಶಿಕ್ಷಕರ ಅಭಿಮಾನವನ್ನು ಹೊಂದಿದ್ದ ಕಛೇರಿ ವ್ಯವಸ್ಥಾಪಕರ ವರ್ಗಾವಣೆಯಿಂದ ಒಬ್ಬ ಉತ್ತಮ ಅಧಿಕಾರಿ ಸೇವೆಯನ್ನು ನಮ್ಮ ಶಿಕ್ಷಕ ಸಮುದಾಯ ಕಳೆದುಕೊಂಡಂತಾಗಿದೆ ಎಂದು ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಾಬು ಅಭಿಪ್ರಾಯಪಟ್ಟರು.
ತಾಲೂಕಿನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆ.ಆರ್.ಪುರಂನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವರ್ಗಾವಣೆಗೊಂಡಿರುವ ವ್ಯವಸ್ಥಾಪಕ ಎಸ್ ಪುರುಷೋತ್ತಮ್‌ರೆಡ್ಡಿರನ್ನು ಬೀಳ್ಕೊಟ್ಟು ಮಾತನಾqಡುತ್ತಿದ್ದರು.
ಮುಳಬಾಗಿಲು ತಾಲ್ಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಚಲಪತಿ ಮಾತನಾಡಿ, ವ್ಯವಸ್ಥಾಪಕರಾಗಿ ಕಾರ್ಯಭಾರ ವಹಿಸಿಕೊಂಡ ಮೇಲೆ ಪ್ರೌಢಶಾಲಾ ಶಿಕ್ಷಕರ ಕೆಲಸ ಕಾರ್ಯಗಳು ಸುಗಮವಾಗಿದ್ದವು, ವ್ಯವಸ್ಥಾಪಕರು ಸ್ಥಳೀಯರಾಗಿದ್ದು, ಈ ತಾಲೂಕಿನ ಆಡಳಿತದ ಎಲ್ಲಾ ಆಯಾಮಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು ಎಂದ ಅವರು ವರ್ಗಾವಣೆ ಆಡಳಿತದ ವಿಚಾರ ಈ ತಾಲೂಕಿನ ಪ್ರತಿಭೆ ಮುಂದೆಯು ಒಳ್ಳೆಯ ಹೆಸರನ್ನು ಗಳಿಸಲಿ ಎಂದು ಶುಭ ಕೋರಿದರು.
ಕೋಲಾರ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ರೆಡ್ಡಿ ಪುಸ್ತಕ ನೀಡಿ ಶುಭ ಕೋರಿದರು. ಈ ಮಧ್ಯೆ ಶಾಲಾ ಶಿಕ್ಷಣ ಇಲಾಖೆಯ ಹಲವು ಕಾರ್ಯಕ್ರಮಗಳು ತಾಲೂಕಿನ ಎಲ್ಲಾ ಶಿಕ್ಷಕರ ವೃಂದ ಸಂಘಗಳ ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದರ ಪ್ರತೀಕವಾಗಿ ಮುಖ್ಯ ಶಿಕ್ಷಕರ ಸಂಘ, ಸಹ ಶಿಕ್ಷಕರ ಸಂಘ,ಬಡ್ತಿ ಸಹ ಶಿಕ್ಷಕರ ಸಂಘ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪದಾಧಿಕಾರಿಗಳು ಹಾಜರಿದ್ದು ಶುಭ ಕೋರಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಕಾರ್ಯದರ್ಶಿ ಟಿ.ಅರುಣ್ ಕುಮಾರ್, ಉಪಾಧ್ಯಕ್ಷ ಕೆ ಬಿ ಮಂಜುನಾಥ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ರಹೀಂ ಶರೀಫ್, ಜಿಲ್ಲಾ ಪ್ರತಿನಿಧಿ ಬಿ.ಎಂ.ಮುನಿರಾಮಯ್ಯ, ಬಡ್ತಿ ಶಿಕ್ಷಕರ ಸಂಘದ ಕಾರ್ಯದರ್ಶಿ ಭಾಗ್ಯವಂತಯ್ಯ, ಖಜಾಂಚಿ ಕೆ.ಎಂ.ವೆಂಕಟಾಚಲಪತಿ, ನಿಕಟ ಪೂರ್ವ ಅಧ್ಯಕ್ಷ ಮುನಿಸ್ವಾಮಿ, ಇಸಿಒ ಗುರುರಾಜ್, ಶಿಕ್ಷಕ ನಾಗೇಶ್ ಮತ್ತಿತರರು ಹಾಜರಿದ್ದರು.