ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಕ್ಕೆ ಬೆಂಕಿ, ಅಪಾರ ಪ್ರಮಾಣದ ಅರಣ್ಯ ನಾಶ

ಸಂಜೆವಾಣಿ ವಾರ್ತೆ
ಚಾಮರಾಜನಗರ,ಮಾ.31- ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯ ವ್ಯಾಪ್ತಿಯ ಕೆ.ಕೆ.ಡ್ಯಾಂ ಬಳಿ ಅರಣ್ಯಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಅರಣ್ಯ ನಾಶವಾದ ಘಟನೆ ಶನಿವಾರ ನಡೆದಿದೆ.
ಶನಿವಾರ ಬೆಳಗ್ಗೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಬೈಲೂರು ವಲಯದ ಕೆ.ಕೆ.ಡ್ಯಾಂ ಬಳಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಈ ವೇಳೆ ಮತ್ತೊಂದು ಕಡೆ ಬೆಂಕಿ ಕಾಣಿಸಿಕೊಂಡಿದ್ದು 60ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.
ಜೋರಾದ ಗಾಳಿ ಇರುವುದರಿಂದ ಬೆಂಕಿಯ ಕೆನ್ನಾಲಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಕುರುಚಲುಗಿಡ, ಹುಲ್ಲು ಜಾತಿಯ ಗಿಡಗಳು ಸಂಪೂರ್ಣ ನಾಶವಾಗಿದೆ. ಈ ಭಾಗದಲ್ಲಿ ಹೆಚ್ಚಾಗಿ ಹುಲ್ಲಿನ ಜಾತಿಯ ಗಿಡಗಳಿದ್ದು ಬೇಸಿಗೆ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಒಣಗಿವೆ. ಇದರಿಂದಾಗಿ ಬೆಂಕಿ ಬಿದ್ದ ಸ್ಥಳದಿಂದ ವೇಗವಾಗಿ ಬೆಂಕಿ ಹರಡುತ್ತಿದೆ. ಟವರ್‍ಗಳ ಮೂಲಕ ಸಿಬ್ಬಂದಿ ಬೆಂಕಿ ಕಾಣಿಸಿಕೊಳ್ಳುವ ಕಡೆಗಳಿಗೆ ತೆರಳಿ ಬೆಂಕಿ ನಂದಿಸಲು ಮುಂದಾಗಿದ್ದಾರೆ.
ಕಿಡಿ ಗೇಡಿಗಳಿಂದ ಕೃತ್ಯ : ಬೈಲೂರು ವಲಯ ವ್ಯಾಪ್ತಿಯ ಕೆ.ಕೆ.ಡ್ಯಾಂ ಬಳಿ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಪುಣಜನೂರು, ಯಳಂದೂರು ವಲಯಗಳಲ್ಲೂ ಅರಣ್ಯಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಅರಣ್ಯ ನಾಶವಾಗಿತ್ತು. ಈಗಲೂ ಇದು ಮುಂದುವರಿದಿದ್ದು ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದು ಬೆಂಕಿ ಹಚ್ಚಿರುವವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿಯೂ ತೊಡಗಿದ್ದಾರೆ.