ಬಿಆರ್‌ಐ ಯೋಜನೆಯಿಂದ ಇಟಲಿ ಔಟ್

ಬೀಜಿಂಗ್, ಡಿ.೭- ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ (ಬಿಆರ್‌ಐ) ಯೋಜನೆಯ ಮೂಲಕ ಜಾಗತಿಕ ವ್ಯಾಪಾರದಲ್ಲಿ ಪ್ರಮುಖ ದೇಶವಾಗಿ ಹೊರಹೊಮ್ಮುವ ಚೀನಾದ ಕನಸಿಗೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಿದೆ. ಸದ್ಯ ಬಿಆರ್‌ಐ ಯೋಜನೆಯಿಂದ ಹೊರಬರಲು ಯುರೋಪ್‌ನ ಪ್ರಮುಖ ದೇಶಗಳಲ್ಲಿ ಒಂದಾಗಿರುವ ಇಟಲಿ ಅಧಿಕೃತವಾಗಿ ನಿರ್ಧರಿಸಿದೆ.
ಬಿಆರ್‌ಐ ಯೋಜನೆ ಭಾಗವಾಗದಿರುವ ಬಗ್ಗೆ ಇಟಲಿ ಪ್ರಧಾನಿ ಮೆಲೊನಿ ಅವರು ಚೀನಾಗೆ ಈಗಾಗಲೇ ತಿಳಿಸಿದ್ದಾರೆ. ೨೦೧೩ರಲ್ಲಿ ಆರಂಭವಾಗಿದ್ದ ಮಹತ್ವಾಕಾಂಕ್ಷೆಯ ವ್ಯಾಪಾರ ಮತ್ತು ಮೂಲಸೌಕರ್ಯ (ಬಿಆರ್‌ಐ) ಯೋಜನೆಯ ಭಾಗವಾಗಲು ೨೦೧೯ರಲ್ಲಿ ಯುರೋಪ್‌ನ ಏಕಮಾತ್ರ ರಾಷ್ಟ್ರವೆಂಬ ಇಟಲಿ ಆಸಕ್ತಿ ವಹಿಸಿತ್ತು. ಈ ಮೂಲಕ ಬಿಆರ್‌ಐ ಯೋಜನೆಯಲ್ಲಿರುವ ಯುರೋಪ್‌ನ ಏಕಮಾತ್ರ ರಾಷ್ಟ್ರವೆಂಬ ಹೆಸರಿಗೆ ಇಟಲಿ ಪಾತ್ರವಾಗಿತ್ತು. ಸಹಜವಾಗಿಯೇ ಇದು ಅಮೆರಿಕಾ, ಭಾರತಕ್ಕೆ ಕೊಂಚ ಹಿನ್ನಡೆ ತಂದಿತ್ತು. ಅಲ್ಲದೆ ಈ ಯೋಜನೆಯಿಂದ ಹಿಂದೆಬರುವಂತೆ ಇಟಲಿಗೆ ಅಮೆರಿಕಾ ಆ ಸಮಯದಲ್ಲಿ ಒತ್ತಾಯ ಕೂಡ ಮಾಡಿತ್ತು ಎನ್ನಲಾಗಿದೆ. ಇನ್ನು ಈಗಾಗಲೇ ಬಿಆರ್‌ಐ ಯೋಜನೆಯ ಮೂಲಕ ಪಾಕಿಸ್ತಾನವನ್ನು ಸಾಲದ ಕೂಪಕ್ಕೆ ತಳ್ಳಿರುವ ಚೀನಾ, ಇದೀಗ ಯುರೋಪ್‌ನ ಪ್ರವೇಶಿಸಲು ಹೆಚ್ಚಿನ ಆಸಕ್ತಿ ವಹಿಸಿತ್ತು. ಆದರೆ ಇಟಲಿ ಹೊರತುಪಡಿಸಿ ಯಾವುದೇ ರಾಷ್ಟ್ರಗಳು ಚೀನಾದ ಯೋಜಗೆ ಸೊಪ್ಪು ಹಾಕಿರಲಿಲ್ಲ. ಆದರೆ ಇದೀಗ ಇಟಲಿ ಕೂಡ ಯೋಜನೆಯಿಂದ ಹಿಂದೆಸರಿದಿರುವುದು ಸಹಜವಾಗಿಯೇ ಚೀನಾಗೆ ಮರ್ಮಾಘಾತ ನೀಡಿದೆ. ಸದ್ಯದ ಜಾಗತಿಕ ಸ್ಥಿತಿಯಲ್ಲಿ ಅಮೆರಿಕಾ ಹಾಗೂ ಚೀನಾ ನಡುವೆ ಶೀತಲ ಸಮರ ಆರಂಭವಾಗಿದೆ. ಚೀನಾ ತನ್ನ ಯೋಜನೆಗಳ ಮೂಲಕ ಆಫ್ರಿಕಾ ಸೇರಿದಂತೆ ದಕ್ಷಿಣ ಏಶ್ಯಾದ ದೇಶಗಳನ್ನು ತನ್ನತ್ತ ಸೆಳೆಯುತ್ತಿದ್ದರೆ ಭಾರತ ಹಾಗೂ ಅಮೆರಿಕಾ ಕೂಡ ತಮ್ಮದೇ ಆದ ಗುಂಪು ರಚಿಸಿಕೊಂಡು, ಗ್ಲೋಬಲ್ ಸೌತ್ ರಾಷ್ಟ್ರಗಳ ಏಳಿಗೆಗೆ ದುಡಿಯುತ್ತಿದೆ. ಇನ್ನು ೨೦೧೩ ರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬಿಆರ್‌ಐ ಯೋಜನೆ ಪ್ರಾರಂಭಿಸಿದ್ದರು. ಏಷ್ಯಾ ಮತ್ತು ಯುರೋಪ್‌ನಾದ್ಯಂತ ಅಂದಾಜು ಒಂದು ಸಾವಿರ ಶತಕೋಟಿ ಡಾಲರ್ ಹೂಡಿಕೆ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಅಲ್ಲದೆ ಹೊಸ ಮತ್ತು ನವೀಕರಿಸಿದ ರೈಲ್ವೆಗಳು ಮತ್ತು ಬಂದರುಗಳು ಸೇರಿದಂತೆ ಯೋಜನೆಗಳು ಚೀನಾವನ್ನು ಯುರೋಪ್ ಮತ್ತು ಏಷ್ಯಾದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿವೆ. ಭಾರತ ಹೊರತುಪಡಿಸಿ ನೆರೆಹೊರೆಯ ಹಲವು ದೇಶಗಳು ಈ ಯೋಜನೆಯ ಭಾಗವಾಗಿದೆ.