ಬಾ. ಸಾಮಗರಿಗೆ ಭಾರತರತ್ನ ಡಾ| ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಪ್ರಧಾನ

ಮಂಗಳೂರು, ಮಾ.೨೨- ಹೊರನಾಡಿನಲ್ಲಿ ಎಲ್ಲ ಜಾತಿ ವರ್ಗಗಳವರನ್ನು ಸೇರಿಸಿಕೊಂಡು ಕನ್ನಡಾಭಿವೃದ್ಧಿಗಾಗಿ ಅಪ್ರತಿಮ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ದೆಹಲಿ ಕನ್ನಡಿಗ, ತುಳುವೇರ್ ಪತ್ರಿಕೆಗಳ ಸಂಪಾದಕ ಬಾ. ಸಾಮಗ ಅವರಿಗೆ ವಿ.ಕೆ.ಎಂ. ಸಂಸ್ಥೆ ಸ್ಥಾಪಿಸಿರುವ ಈ ಸಾಲಿನ ಪ್ರತಿಷ್ಠಿತ ಭಾರತರತ್ನ ಡಾ| ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಮಾ. ೧೮ರಂದು ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಮಗ ಅವರು ಕರ್ನಾಟಕ ಸಂಸ್ಕೃತಿಗೆ, ಕನ್ನಡಕ್ಕೆ ಇನ್ನೂ ಹೆಚ್ಚಿನ ಗೌರವ, ಪ್ರಚಾರ ದೊರಕಿಸಿ ವಿಶ್ವಮಟ್ಟದಲ್ಲಿ ಅಗ್ರಸ್ಥಾನ ಗಳಿಸಲು ಹೊರನಾಡಿನಲ್ಲಿ ವ್ಯವಸ್ಥಿತವಾಗಿ ಕನ್ನಡ ಕಾರ್ಯಕ್ರಮಗಳನ್ನು ನಡೆಸುವುದು ಅವಶ್ಯಕವೆಂದರಲ್ಲದೆ ಕನ್ನಡ ಕ್ರತಿಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವುದು ಆದ್ಯ ಕರ್ತವ್ಯವಾಗಬೇಕೆಂದರು. ಸಮಸ್ತ ಕನ್ನಡಿಗರ ಬೆಂಬಲದಿಂದ ತನಗೆ ದಿಲ್ಲಿಯಲ್ಲಿ ೩೧ ರಾಷ್ಟ್ರೀಯ ಕನ್ನಡ ಸಮ್ಮೇಳನಗಳನ್ನೂ, ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ ೧೦ ಅಖಿಲ ಭಾರತ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸುವುದು ಸಾಧ್ಯವಾಯಿತೆಂದ ಸಾಮಗ ಅವರು ಕರ್ನಾಟಕ ಸಂಸ್ಕೃತಿಗೆ ಪ್ರಬಲ ಶಕ್ತಿಯಿರುವುದರಿಂದ ಸಂಸ್ಕೃತಿಯ ಅವನತಿ ಅಸಾಧ್ಯವೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಪ್ರಸಿದ್ಧ ಕವಿ ಸಿದ್ದಲಿಂಗಯ್ಯ ಅವರು ಹೊರನಾಡಿನಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಸಾಮಗ ಅವರು ಕನ್ನಡ ಕಾರ್ಯಕರ್ತರಿಗೆ ಆದರ್ಶವಾಗಿರುವರೆಂದರಲ್ಲದೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವೆಯಿಂದ ಕನ್ನಡ ಬೆಳೆಸುವವರು ಅವಶ್ಯವಾಗಿರುವರೆಂದರು.
ರಂಗಕರ್ಮಿ ಗೋಪಾಲಕೃಷ್ಣ ನಾಯರಿ, ಕರ್ನಾಟಕ ಮಹಿಳಾ ಪಡೆ ರಾಜ್ಯಾಧ್ಯಕ್ಷೆ ಲತಾ ಗೌಡ, ಜಾನಪದ ಗಾಯಕ ಗುರುರಾಜ ಹೊಸಕೋಟೆ, ನಟಿ ಕಾಮಿನಿದರನ್, ಜಯ ಕರ್ನಾಟಕ ಬೆಂಗಳೂರು ನಗರಾಧ್ಯಕ್ಷ ಜಗದೀಶ್ ಗೌಡ, ಸಂಸ್ಥೆಯ ಕಾರ್ಯಧಕ್ಷ ಸಿ.ಎಂ. ವೆಂಕಟೇಶ್ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ನಟ, ನಿರ್ದೇಶಕ ಸಿ.ಎಂ.ತಿಮ್ಮಯ್ಯ ಕಾರ್ಯಕ್ರಮ ನಿರ್ವಹಿಸಿದರು.