ಬಾಹ್ಯಾಕಾಶ ನಡಿಗೆ ಮೂಲಕ ಇತಿಹಾಸ ನಿರ್ಮಿಸಿದ ವಾಂಗ್

ಬೀಜಿಂಗ್, ನ.೮- ಈಗಾಗಲೇ ಸ್ಪೇಸ್ ಮಿಶನ್‌ಗಳ ಮೂಲಕ ಎಲ್ಲರ ಗಮನ ಸೆಳೆದಿರುವ ಚೀನಾ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಚೀನಾದ ಮಹಾತ್ವಾಕಾಂಕ್ಷೆಯ ಶೆಂನ್ಝೋ-೧೩ ಸ್ಪೇಸ್ ಮಿಶನ್‌ನಲ್ಲಿ ಭಾಗವಹಿಸಿರುವ ಗಗನಯಾನಿ ವಾಂಗ್ ಯೇಪಿಂಗ್ ಇದೀಗ ಬಾಹ್ಯಾಕಾಶದಲ್ಲಿ ನಡೆದಾಡುವ ಮೂಲಕ (ಸ್ಪೇಸ್ ವಾಕ್) ಈ ಸಾಧನೆ ತೋರಿದ ಚೀನಾದ ಮೊದಲ ಮಹಿಳೆ ಎಂಬ ಹೆಗ್ಗಲಿಕೆಗೆ ಪಾತ್ರರಾಗಿದ್ದಾರೆ.
ಅಂತರಿಕ್ಷದಲ್ಲಿರುವ ಚೀನಾದ ತಿಯಾನ್‌ಗೊಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಈಗಾಗಲೇ ಶೆಂನ್ಝೋ-೧೩ ತಲುಪಿದ್ದು, ಕಾರ್ಯಾಚರಣೆ ಆರಂಭವಾಗಿದೆ. ಈ ವೇಳೆ ಶೆಂನ್ಝೋ-೧೩ರ ತಂಡದ ಭಾಗವಾಗಿರುವ ವಾಂಗ್ ಯೇಪಿಂಗ್ ಅವರು ಚೀನಾದ ಸ್ಥಳೀಯ ಕಾಲಮಾನ ನಿನ್ನೆ ವಾಹನೇತರ ಚಟುವಟಿಕೆಯ ಭಾಗವಾಗಿ ಸ್ಪೇಸ್ ಮ್ಯಾಡ್ಯೂಲ್‌ನಿಂದ ಹೊರಬಂದು, ವಾಕ್ ನಡೆಸಿದರು. ಈ ಮೂಲಕ ಇಂಥ ಅದ್ಬುತ ಸಾಧನೆ ತೋರಿದ ಚೀನಾದ ಮೊದಲ ಮಹಿಳೆ ಎಂಬ ಹೆಗ್ಗಲಿಕೆಗೆ ಪಾತ್ರರಾದರು. ೧೯೯೭ರ ಆಗಸ್ಟ್‌ನಲ್ಲಿ ಚೀನಾದ ಪೀಪಲ್ಸ್ ರಿಪಬ್ಲಿಕ್ ಆರ್ಮಿ (ಪಿಎಲ್‌ಎ) ಸೇರಿದ್ದ ವಾಂಗ್, ಬಳಿಕ ಡೆಪ್ಯೂಟಿ ಸ್ಕ್ವಾಡ್ರನ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಬಳಿಕ ೨೦೧೦ರಲ್ಲಿ ಪಿಎಲ್‌ಎ ಭಾಗವಾಗಿರುವ ಗ್ರೂಪ್ ಆಫ್ ಅಸ್ಟ್ರಾನಾಟ್ ಡಿವಿಷನ್‌ಗೆ ಸೇರ್ಪಡೆಗೊಂಡಿದ್ದರು. ಅದೂ ಅಲ್ಲದೆ ೨೦೧೨ ಶೆಂನ್ಜೋ-೯ ಮಿಷನ್‌ನಲ್ಲಿ ವಾಂಗ್ ಅವರು ಬ್ಯಾಕ್‌ಅಪ್ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಂತಿಮವಾಗಿ ೨೦೧೩ರಲ್ಲಿ ಶೆಂನ್ಝೋ-೧೦ರಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿ, ಎಲ್ಲರ ಗಮನ ಸೆಳೆದಿದ್ದರು. ಸದ್ಯ ಶೆಂನ್ಜೋ-೧೩ರ ಮಿಶನ್‌ನಲ್ಲಿ ವಾಂಗ್ ಸ್ಪೇಸ್ ನಡಿಗೆಯ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.