ಬಾವುಟದಲ್ಲೂ ಕಮಿಷನ್ ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ ಕಿಡಿ

ಮೈಸೂರು, ಜು. ೩೧- ರಾಜ್ಯ ಬಿಜೆಪಿ ಸರ್ಕಾರ ಬಾವುಟದಲ್ಲೂ ಕಮಿಷನ್ ಪಡೆಯಲು ಮುಂದಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ವೈ,ಸಿ ರೇವಣ್ಣ ಕಿಡಿಕಾರಿದ್ದಾರೆ.
ವಿವಿಧ ಗುತ್ತಿಗೆಗಳಿಗಾಗಿ ಸರ್ಕಾರ ಶೇ. ೪೦ ರಷ್ಟು ಕಮಿಷನ್ ಪಡೆಯುತ್ತಿದೆ ಎಂಬ ಆರೋಪಗಳ ಬೆನ್ನಲ್ಲೆ ಧ್ವಜದಲ್ಲೂ ಕಮಿಷನ್ ಆರೋಪ ಕೇಳಿ ಬಂದಿದೆ.
ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಿಂಥೆಟಿಕ್ ರಾಷ್ಟ್ರಧ್ವಜ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ವಿರೋಧಿಸಿ ನಾಗರಿಕ ಸಮಿತಿ ಕೈಗೊಂಡಿರುವ ಧ್ವಜ ಸತ್ಯಾಗ್ರಹದಲ್ಲಿ ಮಾತನಾಡಿದ ರೇವಣ್ಣ, ದೇಶವು ಗಾಂಧಿ ಭಾರತವಾಗಿ ಉಳಿದಿಲ್ಲ. ವ್ಯಾಪಾರಿ ಧೋರಣೆಯ ಸರ್ಕಾರ ಆಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಖಾದಿ ರಾಷ್ಟ್ರಧ್ವಜ ಸ್ವಾಭಿಮಾನದ ಸಂಕೇತವಾಗಿತ್ತು. ಆದರೆ, ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿ ವಿದೇಶದಲ್ಲಿ ತಯಾರಾದ ಬಾವುಟಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರಿಗೆ ಮಾಡಿದ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖಾದಿಯಲ್ಲಿ ತಯಾರಾದ ಬಾವುಟಗಳನ್ನು ಮಾತ್ರ ದೇಶಪ್ರೇಮಿಗಳು ಬಳಸಬೇಕು. ಸಿಂಥೆಟಿಕ್ ರಾಷ್ಟ್ರಧ್ವಜವನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದರು.
ರಂಗಕರ್ಮಿ ಪ್ರಸನ್ನ ಮಾತನಾಡಿ, ಖಾದಿ ನೂಲಿನ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಲು ಸರ್ಕಾರ ಸಿಂಥೆಟಿಕ್ ಧ್ವಜಕ್ಕೆ ಅನುಮತಿ ನೀಡಿದೆ. ಇದರಿಂದಾಗಿ ಗ್ರಾಮೀಣರು, ಮಹಿಳೆಯರು, ಶ್ರಮಿಕರು ಕೆಲಸಕ್ಕಾಗಿ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರರಾಜಕಾರಣ, ಆರ್ಥಿಕತೆಯು ವಿದೇಶದತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.