ಬಾವಿಗೆ ಬಿದ್ದ ಚಿರತೆಯ ರಕ್ಷಣೆ

ಕುಂದಾಪುರ, ಎ.೧೦- ಬೇಟೆಗಾಗಿ ನಾಡಿಗೆ ಬಂದು ಬಾವಿಗೆ ಬಿದ್ದ ಚಿರತೆ ಯೊಂದನ್ನು ಕುಂದಾಪುರ ಅರಣ್ಯ ಇಲಾಖೆಯವರು ರಕ್ಷಿಸಿರುವ ಘಟನೆ ನಿನ್ನೆ ಕುಂದಾಪುರ ತಾಲೂಕಿನ ಸೌಕೂರು ದೇವಸ್ಥಾನದ ಬಳಿ ನಡೆದಿದೆ.
ಬೆಳಗ್ಗೆ ೧೧ಗಂಟೆ ಸುಮಾರಿಗೆ ದೇವಸ್ಥಾನ ಸಮೀಪದ ನಿವಾಸಿ ಅಶೋಕ್ ದೇವಾಡಿಗ ಎಂಬವರ ೩೦ ಅಡಿ ಆಳದ ಬಾವಿಗೆ ಚಿರತೆ ಬಿತ್ತೆನ್ನಲಾಗಿದೆ. ಈ ಬಗ್ಗೆ ಗಮನಿಸಿದ ಮನೆಯವರು ಕೂಡಲೇ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಕುಂದಾಪುರ ವಲಯ ಅರಣ್ಯಾಧಿಕಾರಿ ಹಾಗೂ ನೇರಳಕಟ್ಟೆಯ ಅಧಿಕಾರಿ ಮತ್ತು ಸಿಬ್ಬಂದಿ ಚಿರತೆ ರಕ್ಷಣೆಯ ಕಾರ್ಯಾ ಚರಣೆಗೆ ಇಳಿದರು. ಬಾವಿಗೆ ಬುಟ್ಟಿ ಇಳಿಸಿ ಚಿರತೆಯನ್ನು ಅದರ ಮೇಲೆ ಕೂರುವಂತೆ ಮಾಡಲಾಯಿತು. ಬಳಿಕ ಬೋನನ್ನು ಬಾವಿಗೆ ಇಳಿಸಿ ಚಿರತೆ ಅದರೊಳಗೆ ಹೋಗುವಂತೆ ಮಾಡಲಾಯಿತು. ನಂತರ ಬೋನನ್ನು ಮೇಲಕ್ಕೆತ್ತಿ, ಚಿರತೆಯನ್ನು ಸುರಕ್ಷಿತ ವಾಗಿ ಅರಣ್ಯಕ್ಕೆ ಬಿಡಲಾಯಿತು. ಅಂದಾಜು ೨ ವರ್ಷ ಪ್ರಾಯದ ಹೆಣ್ಣು ಚಿರತೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.