ಬಾವಿಗೆ ಬಿದ್ದ ಕಾರ್‌: ಚಾಲಕಿ ಪಾರು

ಕೋಟ, ಜೂ.೫- ಮನೆಯಂಗಳದಲ್ಲಿ ಪಾರ್ಕ್‌ ಮಾಡುತ್ತಿದ್ದ ಸಂದರ್ಭ ಕಾರೊಂದು ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಘಟನೆ ಗುರುವಾರ ರಾತ್ರಿ ಸಾಲಿಗ್ರಾಮದಲ್ಲಿ ನಡೆದಿದೆ. ಆದರೆ ಅದೃಷ್ಟವಶಾತ್‌ ಘಟನೆಯಲ್ಲಿ ಚಾಲಕಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಖ್ಯಾತ ಶ್ರೀಕೃಷ್ಣ ಪಂಚಾಗ ಕರ್ತೃ ಶ್ರೀನಿವಾಸ ಅಡಿಗರ ಮನೆಯಲ್ಲಿ ಈ ಘಟನೆ ನಡೆದಿದೆ. ಪಾರ್ಕ್‌ ಮಾಡುವ ಸಂದರ್ಭ ಕಾರಿನ ಬ್ರೇಕ್‌ನ ಬದಲು ಜೋರಾಗಿ ಎಕ್ಸಿಲೇಟರ್‌ ಅದುಮಿದ್ದು ಈ ಸಂದರ್ಭ ಕಾರು ಮನೆಯ ಬಾವಿಯ ಅವರಣಕ್ಕೆ ಢಿಕ್ಕಿ ಹೊಡೆದಿದೆ. ಕೆಂಪು ಕಲ್ಲಿನಿಂದ ಕೂಡಿದ ಆವರಣ ಗೋಡೆ ಮಳೆಯಿಂದಾಗಿ ಸಡಿಲಗೊಂಡಿದ್ದು ಢಿಕ್ಕಿಯ ರಭಸಕ್ಕೆ ಪುಡಿಯಾಯಿತು. ಆಗ ಅಪಾಯವನ್ನರಿತ ಚಾಲಕಿ ಕಾರಿನಿಂದ ಕೆಳಗೆ ಹಾರಿ ಪಾರಾಗಿದ್ದು ಕಾರು ಬಾವಿಯೊಳಗಡೆ ಬಿದ್ದಿದೆ. ಅನಂತರ ಕ್ರೇನ್‌ ತರಿಸಿ ಸ್ಥಳೀಯರ ಸಹಕಾರದೊಂದಿಗೆ ಕಾರನ್ನು ಬಾವಿಯಿಂದ ಮೇಲೆತ್ತಲಾಯಿತು.