ಬಾವಲಗಾಂವ ಅಖಂಡ ಹರಿನಾಮ ಸಪ್ತಾಹದಲ್ಲಿ ಸಚಿವ ಪ್ರಭು ಚವ್ಹಾಣ ಭಾಗಿ

ಬೀದರ, ಜ. 09: ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಜನವರಿ 7ರಂದು ಔರಾದ ತಾಲೂಕಿನ ಬಾವಲಗಾಂವ ಗ್ರಾಮದಲ್ಲಿ ಏರ್ಪಡಿಸಿದ ಅಖಂಡ ಹರಿನಾಮ ಸಪ್ತಾಹ ಭಾಗವಹಿಸಿದರು.

ಭಜನಾ ತಂಡದ ಕಲಾವಿದರು ಮತ್ತು ಭಕ್ತರೊಂದಿಗೆ ಹೆಜ್ಜೆ ಹಾಕಿ ಭಕ್ತಿಭಾವ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಗ್ರಾಮಸ್ಥರೆಲ್ಲರೂ ಒಗ್ಗೂಡಿ ಧಾರ್ಮಿಕ ಮಹತ್ವವನ್ನು ಸಾರುವ ಅಖಂಡ ಹರಿನಾಮ ಸಪ್ತಾಹ ನಡೆಸುತ್ತಿರುವುದು ಸಂತೋಷವಾಗಿದೆ ಎಂದರು.

ಪಂಢರಿನಾಥ್ ನಾಯಕ್, ಹನುಮಂತ ನಾಯಕ್ ಹಾಗೂ ಭೀಮಾನಾಯಕ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಹರಿನಾಮ ಸಪ್ತಾಹವು ಜನರಲ್ಲಿ ಭಕ್ತಿಭಾವ ಮೂಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಅಶೋಕ ಕಾಳೆ, ಅಶೋಕ ಕುಂಟೆ ಹಾಗೂ ಇತರರು ಉಪಸ್ಥಿತರಿದ್ದರು.