ಬಾಳೆ ಎಲೆಯಲ್ಲಿ ಊಟ ಸೇವಿಸಿದ ಮೋದಿ

ಉಡುಪಿ ,೪- ವಿಶ್ವದಲ್ಲಿ ಅತ್ಯಂತ ರುಚಿಕರ ಅತ್ಯಂತ ರುಚಿಕಟ್ಟಾದ ಉಡುಪಿ ಅಡುಗೆ ದೇಶದ ಶಕ್ತಿ ಕೇಂದ್ರ ಸಂಸತ್ತಿನಲ್ಲಿ ತನ್ನ ಮಧುರ ಕಂಪಿನೊಂದಿಗೆ ಘಮಘಮಿಸಿದೆ. ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಬಾಳೆ ಎಲೆಯಲ್ಲಿ ಉಡುಪಿ ಊಟ ಸವಿದಿದ್ದಾರೆ. ಉಡುಪಿ ಸಾರು. ಪತ್ರೊಡೆ, ಸುಕುರುಂಡೆ, ಹಲಸಿನ ಹಣ್ಣಿನ ಗಟ್ಟಿ, ತಿಮರೆ ಚಟ್ನಿ ಮೊದಲಾದವುಗಳನ್ನು ಚಪ್ಪರಿಸಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡಿನ ಕೆಲವು ಖಾದ್ಯಗಳನ್ನೊಳಗೊಂಡ ಈ ಶುಚಿ ರುಚಿಯಾದ ಭೋಜವನ್ನು ಸವಿದು ಟ್ವೀಟ್ ಮಾಡಿರುವುದು ವಿಶೇಷವಾಗಿದೆ.
ಸಂಸತ್ ಭವನದ ಒಳಾಂಗಣದಲ್ಲಿ ನಡೆದ ಎನಡಿಎ ಸಂಸದರ ಸಭೆಯ ನಂತರ ಏರ್ಪಡಿಸಲಾಗಿದ್ದ ಭೋಜನಕೂಟಕ್ಕೆ ಉಡುಪಿ ಖಾದ್ಯಗಳನ್ನು ತಯಾರಿಸಲಾಗಿತ್ತು. ಉಡುಪಿಯ ಬುಡ್ನಾರು ಸುಬ್ರಹ್ಮಣ್ಯ ಆಚಾರ್ಯರು ಆಹ್ವಾನದ ಮೇರೆಗೆ ದೆಹಲಿಗೆ ತೆರಳಿ ಉಡುಪಿ ಅಡುಗೆಯನ್ನು ಸಿದ್ಧಪಡಿಸಿದ್ದರು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ನಿತಿನ್ ಗಡ್ಕರಿ, ಜೆ.ಪಿ. ನಡ್ಡಾ, ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಸುಬ್ಬಣ್ಣನ ಅಡುಗೆಯ ಸವಿಯುಂಡು ಪ್ರಶಂಸಿದ್ದಾರೆ. ಸುಬ್ರಹ್ಮಣ್ಯರ ಜೊತೆ ಸಹಾಯಕರಾಗಿ ರಾಜಶೇಖರ್ ತೆರಳಿದ್ದರು.