ಬಾಳೆಕಾಯಿ ಹಪ್ಪಳ

ಬೇಕಾಗುವ ಸಾಮಗ್ರಿಗಳು
ಬಾಳೆಕಾಯಿ – ೫
ಉಪ್ಪು- ರುಚಿಗೆ ತಕ್ಕಷ್ಟು
ಹಸಿಮೆಣಸು- ೫ ರಿಂದ ೬
ಜೀರಿಗೆ – ಎರಡು ಚಮಚ
ಇಂಗು – ಒಂದು ಹುಣಸೆ ಬೀಜದ ಗಾತ್ರದಷ್ಟು
ಹುಳಿ- ಚಿಟಿಕೆ
ಮಾಡುವ ವಿಧಾನ
ಬಾಳೆಕಾಯಿಯನ್ನು ಸಿಪ್ಪೆ ಸಹಿತ ಅರ್ಧ ಹೆಚ್ಚಿಕೊಂಡು ಹಬೆಯಲ್ಲಿ ಬೇಯಿಸಿಕೊಳ್ಳಿ. ಇದಕ್ಕಾಗಿ ನೀವು ಕುಕ್ಕರ್ ನ್ನು ಬಳಸಬಹುದು ಇಲ್ಲವೇ ಇಡ್ಲಿ ಅಟ್ಟದಲ್ಲಿ ಇಟ್ಟು ಕೂಡ ಬೇಯಿಸಬಹುದು. ಬೇಯಿಸಿದ ಬಾಳೆಕಾಯಿಯನ್ನು ತಣಿಯಲು ಬಿಡಿ ಮತ್ತು ಅದರ ಸಿಪ್ಪೆಯನ್ನು ತೆಗೆಯಿರಿ. ಬೇಯಿಸಿದ ನಂತರ ಇದು ಸುಲಭವಾಗಿ ಸಿಪ್ಪೆ ಬಿಟ್ಟುಕೊಳ್ಳುತ್ತದೆ. ನಂತರ ಬಾಳೆಕಾಯಿ, ಉಪ್ಪು, ಜೀರಿಗೆ, ಇಂಗು, ಹಸಿಮೆಣಸು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ. ಉದ್ದದ ಬಾಳೆಕಾಯಿ ಹಾಕಿದರೆ ಮಿಕ್ಸಿ ಮಾಡುವುದಕ್ಕೆ ಕಷ್ಟವಾಗುತ್ತದೆ. ಹಾಗಾಗಿ ಬಾಳೆಕಾಯಿಯನ್ನು ಸ್ವಲ್ಪ ಜಜ್ಜಿಕೊಂಡು ಸಣ್ಣಸಣ್ಣ ಹೋಳುಗಳಾಗಿ ಮಾಡಿಕೊಂಡರೆ ಮಿಕ್ಸಿಗೆ ತೊಂದರೆಯಾಗುವುದಿಲ್ಲ. ಮಿಕ್ಸಿ ಮಾಡುವಾಗ ಸ್ವಲ್ಪ ನೀರನ್ನೂ ಸೇರಿಸಿಕೊಳ್ಳಿ. ರುಬ್ಬಿದ ಮಿಶ್ರಣವು ಗಟ್ಟಿಯಾದ ಇಡ್ಲಿ ಹಿಟ್ಟಿನ ಹದದಂತಾಗಲಿ. ಬೇಕಿದ್ದರೆ ಹುಣಸೆಹುಳಿ, ಬಿಂಬಲು ಹುಳಿ ಯಾವುದನ್ನಾದರೂ ರುಬ್ಬುವಾಗ ಸೇರಿಸಿಕೊಳ್ಳಬಹುದು. ಆದರೆ ಬಾಳೆಕಾಯಿಯಲ್ಲೇ ಸ್ವಲ್ಪ ಹುಳಿಯ ಅಂಶ ಇರುವುದರಿಂದಾಗಿ ಹೆಚ್ಚುವರಿ ಹುಳಿಯನ್ನು ಸೇರಿಸುವ ಅಗತ್ಯವಿಲ್ಲ. ರುಬ್ಬಿದ ಮಿಶ್ರಣವನ್ನು ಸಣ್ಣಸಣ್ಣ ಹಪ್ಪಳದ ಶೇಪಿನಲ್ಲಿ ದೋಸೆ ಹಚ್ಚುವಂತೆ ಒಂದು ಪ್ಲಾಸ್ಟಿಕ್ ಕವರ್ ಮೇಲೆ ಹಚ್ಚಿ ಎರಡರಿಂದ ಮೂರು ದಿನ ಬಿಸಿಲಿನಲ್ಲಿ ಒಣಗಿಸಿ. ಒಂದು ಹಪ್ಪಳಕ್ಕೆ ಒಂದು ಸಟಕದಷ್ಟು ಹಿಟ್ಟು ಬೇಕಾಗುತ್ತದೆ. ತೀರಾ ತೆಳುವಾಗಿ ಹಚ್ಚುವ ಅಗತ್ಯವಿಲ್ಲ. ಬಾಳೆಕಾಯಿ ಹಪ್ಪಳವು ಸ್ವಲ್ಪ ದಪ್ಪವೇ ಇರುತ್ತದೆ. ಒತ್ತುವ ಹಪ್ಪಳಕ್ಕಿಂತ ಹಚ್ಚುವ ಹಪ್ಪಳವು ತಯಾರಿಕೆಗೆ ನಿಮಗೆ ಹೆಚ್ಚು ಸಮಯ ಹಿಡಿಯುವುದಿಲ್ಲ ಮತ್ತು ಒಬ್ಬರೇ ತಯಾರಿಸುವುದಕ್ಕೆ ಸಾಧ್ಯವಿದೆ. ಮೂರು ದಿನ ಬಿಸಿಲಿನಲ್ಲಿ ಒಣಗಿದ ಹಪ್ಪಳವನ್ನು ನೀವು ಎರಡು ತಿಂಗಳು ಸಂಗ್ರಹಿಸಿ ಇಡಬಹುದು.. ಈ ಹಪ್ಪಳವನ್ನು ಬಿಸಿಬಿಸಿ ಎಣ್ಣೆಯಲ್ಲಿ ಕರಿದರೆ ಊಟದ ಜೊತೆಗೆ ಅಧ್ಬುತವಾಗಿರುತ್ತದೆ. ೫ ಬಾಳೆಕಾಯಿಯಲ್ಲಿ ಅಂದಾಜು ೨೫ ಹಪ್ಪಳವನ್ನು ತಯಾರಿಸಬಹುದು. ಹಪ್ಪಳ ಕರಿದ ನಂತರ ಕಾಯಿತುರಿಯ ಜೊತೆಗೆ ಅಥವಾ ಮಸಾಲಾ ಪಾಪಡ್ ಮಾಡಿಕೊಂಡು ಕೂಡ ಸೇವಿಸಬಹುದು.