ಬಾಲ ಬಿಚ್ಚಿದರೆ ಹುಷಾರ್ ರೌಡಿಗಳಿಗೆ ಆಯುಕ್ತರ ಎಚ್ಚರಿಕೆ

ಬೆಂಗಳೂರು, ಮೇ.೨- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತದಾರರನ್ನು ಬೆದರಿಸಿ ರೌಡಿ ಚಟುಚಟಿಕೆ ನಡೆಸಿದರೆ ಹೆಡೆಮುರಿ ಕಟ್ಟಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ.ನಗರದಲ್ಲಿಂದು ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ ಪೊಲೀಸರು ರೌಡಿಗಳ ಚಟುವಟಿಕೆಗಳನ್ನು ನಿಯಂತ್ರಣ ಮಾಡಲಾಗಿದೆ. ಜೊತೆಗೆ, ಅತಿ ಸೂಕ್ಷ್ಮ ಮತಗಟ್ಟೆಗಳ ಮೇಲೆ ನಿಗಾ ಇಡಲಾಗಿದೆ. ಒಂದು ವೇಳೆ ಮತದಾರರ ಮೇಲೆ ಪ್ರಭಾವ ಅಥವಾ ಬೆದರಿಕೆ ಹಾಕಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.ಬೆಂಗಳೂರು ನಗರದಲ್ಲಿ ಶೇ.೫೨ರಷ್ಟು ಮಾತ್ರ ಮತದಾನವಾಗುತ್ತಿದ್ದು, ಅದನ್ನು ಶೇ.೭೫ಕ್ಕೆ ಹೆಚ್ಚಿಸಲು ಭಾರತ ಚುನಾವಣಾ ಆಯೋಗ, ಬಿಬಿಎಂಪಿ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಇನ್ನೂ, ಯುವ ಮತದಾರರು ತಮ್ಮ ವಿವೇಚನೆ ಹಾಗೂ ಮಾನದಂಡದ ಪ್ರಕಾರ ಸರಿಯಾದ ಅಭ್ಯರ್ಥಿಗೆ ಮತದಾನ ಮಾಡಿ. ಒಂದು ಮತವನ್ನು ಕೂಡಾ ನಾವು ಕಡೆಗಣಿಸುವಂತಿಲ್ಲ. ಆದ್ದರಿಂದ ಎಲ್ಲರೂ ತಮ್ಮ-ತಮ್ಮ ಜವಾಬ್ದಾರಿಯನ್ನು ಅರಿತು ಮತದಾನ ಮಾಡಲು ಎಂದು ತಿಳಿಸಿದರು.ದೂರು ನೀಡಿ: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀವು ವಾಸಿಸುವ ಸ್ಥಳದಲ್ಲಿ ಏನಾದರೂ ಅಕ್ರಮ ಅಥವಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಸಿವಿಜಿಲ್ ತಂತ್ರಾಂಶದಲ್ಲಿ ಭಾವಚಿತ್ರ ಹಾಗೂ ವಿಡಿಯೋ ಮೂಲಕ ದೂರು ದಾಖಲಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.ಬಿಬಿಎಂಪಿ ಆಡಳಿತ ವ್ಯವಸ್ಥೆಯು ಹಲವು ವರ್ಷಗಳಿಂದಲೂ ಸವಾಲುಗಳನ್ನು ಎದುರಿಸಿಕೊಂಡೇ ಬಂದಿದೆ. ಬೇರೆ ಬೇರೆ ಸವಾಲುಗಳು ಇದ್ದೇ ಇವೆ. ಎಲ್ಲ ಸವಾಲುಗಳನ್ನು ಎದುರಿಸಲು ಆಡಳಿತ ಯಂತ್ರವು ಸಮರ್ಥವಾಗಿದೆ. ನಗರದಲ್ಲಿ ಕರ್ತವ್ಯ ನಿಭಾಯಿಸುವುದು ಕ್ಲಿಷ್ಟಕರ. ಆದರೆ, ಅದಕ್ಕೆಲ್ಲಾ ಹೆದರುವುದಿಲ್ಲ. ಅನುಭವಿ ಅಧಿಕಾರಿ, ಸಿಬ್ಬಂದಿಯ ನೆರವಿನೊಂದಿಗೆ ಸನ್ನಿವೇಶ, ಸಂದರ್ಭಕ್ಕೆ ಅನುಗುಣವಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ರಸ್ತೆಗಳಲ್ಲಿ ಸಣ್ಣ ಗುಂಡಿ ಬೀಳುತ್ತಿದ್ದಂತೆಯೇ ಅದನ್ನು ಮುಚ್ಚಬೇಕು. ಇಲ್ಲವಾದಲ್ಲಿ ಗುಂಡಿ ಬದಲು ಹಳ್ಳ ಮುಚ್ಚಬೇಕಾಗುತ್ತದೆ. ರಸ್ತೆ ಗುಂಡಿ ಸಮಸ್ಯೆ ಪ್ರತಿ ವರ್ಷವೂ ಇರುತ್ತದೆ. ಜನರು ಗುಂಡಿ ಮುಕ್ತ ರಸ್ತೆಗಳನ್ನು ಅಪೇಕ್ಷಿಸುತ್ತಾರೆ. ಅವರ ಅಪೇಕ್ಷೆ ಈಡೇರಿಸಲು ಸಕಲ ಪ್ರಯತ್ನ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದರು.