ಕಲಬುರಗಿ :ಜೂ.4:ಇಂದಿನ ಮಕ್ಕಳೇ ಭವಿಷ್ಯದ ನಾಗರಿಕರಾಗಿರುವದರಿಂದ ಅವರಿಗೆ ಶಿಕ್ಷಣ, ಸಂಸ್ಕಾರ, ಮೌಲ್ಯಗಳನ್ನು ದೊರೆಯುವಂತೆ ಮಾಡಬೇಕು. ಇವುಗಳಿಂದ ವಂಚಿತರನ್ನಾಗಿ ಮಾಡಿ, ಬಾಲ ಕಾರ್ಮಿಕ, ಬಾಲ್ಯ ವಿವಾಹದಂತಹ ಅಪರಾಧ ಚಟುವಟಿಕೆಗಳನ್ನು ನಿರ್ಮೂಲನೆ ಮಾಡಬೇಕು. ಮಕ್ಕಳ ಮೇಲೆ ಜರುಗುವ ದೌರ್ಜನ್ಯವನ್ನು ನಿರ್ಮೂಲನೆ ಮಾಡಲು ಸಂವಿಧಾನ, ಸರ್ಕಾರಗಳು ಅನೇಕ ಕಾಯ್ದೆ-ಕಾನೂನುಗಳನ್ನು ರಚಿಸಿ ಜಾರಿಗೊಳಿಸಿದೆ. ಅವುಗಳಿಂದಲೇ ದೌರ್ಜನ್ಯ ಸಂಪೂರ್ಣವಾಗಿ ನಾಶವಾಗಲು ಸಾಧ್ಯವಿಲ್ಲ. ಜೊತೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಅಭಿಪ್ರಾಯಪಟ್ಟರು.
ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ಬಾಲದೌರ್ಜನ್ಯ ವಿರೋಧಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಬಾಲಕ ಮತ್ತು ಬಾಲಕಿಯರನ್ನು ಅವರ ಬಾಲ್ಯದ ಕನಸುಗಳಿಂದ ದೂರವಿರಿಸಲು ಯಾರಿಗೂ ಹಕ್ಕಿಲ್ಲ. ಅವರಿಗೆ ದೊರೆಯಬಹುದಾದ ಎಲ್ಲಾ ಹಕ್ಕುಗಳು, ಸೌಕರ್ಯಗಳನ್ನು ಒದಗಿಸಿಕೊಡುವುದು ಪಾಲಕ-ಪೋಷಕರ ಆದ್ಯ ಕರ್ತವ್ಯವಾಗಿದೆ. ಸಾಕ್ಷರತೆಯ ಪ್ರಮಾಣ ಹೆಚ್ಚಾಗುವದರಿಂದ ಬಾಲಕಾರ್ಮಿಕ ಪದ್ಧತಿ ಕಡಿಮೆಯಾಗುತ್ತದೆ. ಬಾಲ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ, ಪರಿಹಾರಕ್ಕಾಗಿ ಸಹಾಯವಾಣಿ 1098ಕ್ಕೆ ಸಂಪರ್ಕಿಸಬಹುದಾಗಿದೆ. ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಪೋಕ್ಸೋ ಕಾಯ್ದೆ ಪರಿಣಾಮಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಬಾಳ್ಳಿ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಪ್ರಮುಖರಾದ ಕಾಶಿನಾಥ ಚೇಂಗಟಿ, ಶಾಂತಪ್ಪ ಚೇಂಗಟಿ, ರವಿ ಚೇಂಗಟಿ, ಸುಷ್ಮಾ ಕೆ.ಚೇಂಗಟಿ, ಅಣ್ಣಾರಾಯ ದಣ್ಣೂರ್, ಸುವರ್ಣ, ಶಾಂತಾಬಾಯಿ, ಶರಣಮ್ಮ, ಶಿವಕುಮಾರ, ಶಿವಪುತ್ರ, ಶಿವಲೀಲಾ, ಸುಧಾ, ಶಿವಶಂಕರ, ಸುಜ್ಞಾನಿ, ಪ್ರಭಾಕರ ಸೇರಿದಂತೆ ಮತ್ತಿತರರಿದ್ದರು.