ಬಾಲ ಚೈತನ್ಯ ಮಕ್ಕಳ ಆರೋಗ್ಯ ಕೇಂದ್ರದ ಸಮಾರೋಪ


ಬಳ್ಳಾರಿ,ಜೂ.03: ಮನೆಯಲ್ಲಿ ಮಕ್ಕಳ ಆರೋಗ್ಯಕ್ಕಾಗಿ ಶುಚಿತ್ವ, ಸರಿಯಾದ ಸಮಯದಲ್ಲಿ ಔಷಧಿ ನೀಡುವ ಜೊತೆಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವ ಮೂಲಕ ಮಗುವಿನ ಕಾಳಜಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ಧನ್ ಅವರು ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯ ಮತ್ತು ವಿಮ್ಸ್ ಮಕ್ಕಳ ವಿಭಾಗ, ಜಿಲ್ಲಾ ಆಸ್ಪತ್ರೆ, ಆಯುಷ್ ಇಲಾಖೆ, ಭಾರತೀಯ ಮಕ್ಕಳ ತಜ್ಞ ವೈದ್ಯರ ಸಂಘದ ಇವರ ಸಂಯಕ್ತಾಶ್ರಯದಲ್ಲಿ ನಗರದ ಕೋಟೆ ಆವರಣದ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಆರಂಭಿಸಲಾದ ಬಾಲ ಚೈತನ್ಯ ಮಕ್ಕಳ ಆರೋಗ್ಯ ಕೇಂದ್ರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡೀ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿಯು ಅಪೌಷ್ಟಿಕತೆಯುಳ್ಳ ಕಡಿಮೆ ತೂಕ ಇರುವ ಮಕ್ಕಳ ತೂಕವನ್ನು ಹೆಚ್ಚಿಸುವುದಕ್ಕೆ ವಿಶೇಷ ಕಾಳಜಿಗಾಗಿ 14 ದಿನಗಳ ಕಾಲ ವಸತಿ ಸಹಿತವಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು ಎಂದರು.
2021 ರಲ್ಲಿ ಮೊದಲ ಬಾರಿ ಆರಂಭಿಸಿದ ಈ ಯೋಜನೆ ಅತ್ಯಂತ ಯಶಸ್ವಿಗಾಗಿ ಮಗುವಿನ ಆರೈಕೆಗೆ ಕೊಡುಗೆ ನೀಡಿದ ಹಿನ್ನಲೆ ಮೂರನೇ ಬಾರಿಯೂ ವಸತಿ ನಿಲಯಗಳಲ್ಲಿ ಮಕ್ಕಳಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಆರೋಗ್ಯ ಇಲಾಖೆಯ ವೈದ್ಯರು, ವಿಮ್ಸ್ ಮಕ್ಕಳ ತಜ್ಞ ವೈದ್ಯರು ಹಾಗೂ  ಭಾರತೀಯ ಮಕ್ಕಳ ತಜ್ಞರ ಸಂಘದ ಸದಸ್ಯರು ಮಗುವಿನ ತೂಕ, ಎತ್ತರ ಆರೋಗ್ಯದ ಸಮಸ್ಯೆಗಳ ಅನುಸಾರ ನೀಡಿದ ಸೂಚನೆಗಳನ್ನು ಪಾಲಿಸಿ ತಾಯಂದಿರು ಯಾವುದೇ ಕಾರಣಕ್ಕೂ ಮನೆಯಲ್ಲಿ ಮಗುವಿನ ತೂಕ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ತಾಯಿಯು ಸಹ ತನ್ನ ಆರೋಗ್ಯದ ಕಡೆ ಗಮನ ನೀಡಿ ಅಪೌಷ್ಟಿಕತೆಯಿಂದ ಮಗುವನ್ನು ರಕ್ಷಿಸಿ ಸದೃಢರನ್ನಾಗಿ ಮಾಡುವಂತೆ ಕೋರಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಅವರು ಮಾತನಾಡಿ, ಜಿಲ್ಲೆಯ ಬಳ್ಳಾರಿ, ಸಂಡೂರು, ಕಂಪ್ಲಿ, ಸಿರಗುಪ್ಪ, ಯರ್ರಂಗಳಿಗಿ ಸೇರಿದಂತೆ  ಐದು ವಿವಿಧ ವಸತಿನಿಲಯಗಳಲ್ಲಿ ಬಾಲ ಚೈತನ್ಯ ಕೇಂದ್ರಗಳನ್ನು ಆರಂಭಿಸಲಾಗಿತ್ತು.
ಈ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ತಜ್ಞರು ತಿಳಿಸಿದಂತೆ ಮೊಟ್ಟೆ, ಹಾಲು, ಬಾಳಿಹಣ್ಣು, ಗಂಜಿ, ಬಗೆಬಗೆಯ ತರಕಾರಿಗಳಿಂದ ತಯಾರಿಸಿದ ಆಹಾರ ನೀಡುವ ಜೊತೆಗೆ ಮಕ್ಕಳಿಗೆ ಆಟಿಕೆಗಳ ವ್ಯವಸ್ಥೆ, ತಾಯಂದಿರಿಗೆ ಯೋಗ, ಮನರಂಜನಾ ಆಟಗಳು, ಆರೋಗ್ಯ ಜಾಗೃತಿಯ ವಿಡಿಯೋ ಪ್ರದರ್ಶನ, ಆರೋಗ್ಯ, ನೈರ್ಮಲ್ಯ ಕುರಿತ ಉಪನ್ಯಾಸಗಳನ್ನು ಏರ್ಪಡಿಸಿ ತಾಯಿಗೂ ಸಹ ಆರೈಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಆಹಾರವನ್ನು ತಯಾರಿಸುವ ಮೂಲಕ ಮತ್ತು ಮೇಲ್ವಿಚಾರಕರ ಹಾಗೂ  ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ನೇತೃತ್ವದಲ್ಲಿ ತಾಯಿ ಮಗುವಿಗೆ ಅಲ್ಲಿಯೇ ಯಾವುದೇ ರೀತಿಯ  ಲೋಪವಾಗದಂತೆ ಮಕ್ಕಳ ಕಾಳಜಿ ವಹಿಸಲಾಗಿತ್ತು ಎಂದರು.
ಮುಂದಿನ ದಿನಗಳಲ್ಲಿ ಮಕ್ಕಳಿಗೆ ಮನೆಯಲ್ಲಿ ಸರಿಯಾದ ಕ್ರಮದ ಪೌಷ್ಟಿಕ ಆಹಾರವನ್ನು ನೀಡಬೇಕು. ಯಾವುದೇ ಹೊರಗಡೆಯ ಕರಿದ ಆಹಾರ ಪದಾರ್ಥಗಳು ತಿನ್ನದಂತೆ ಮನಸ್ಸು ಬದಲಾಯಿಸಬೇಕು ಹಾಗೂ  ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ನಿಮಗೋಸ್ಕರ ಮಗುವಿಗೆ ಸಿದ್ಧಪಡಿಸುವ ಆಹಾರವನ್ನು ಪ್ರತಿದಿನ ಪಡೆದುಕೊಳ್ಳುವಂತೆ ತಾಯಂದಿರಿಗೆ ಹೇಳಿದರು.
ಆರೋಗ್ಯ ಕಾರ್ಡ್ ಪುಸ್ತಕದಲ್ಲಿ ವಿವಿಧ ಶಕ್ತಿಯುತ ಆಹಾರ ತಯಾರಿಕೆಯ ಬಗ್ಗೆ ಮಾಹಿತಿ ಇದ್ದು, ಇದರ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ಮಗುವಿನ ಕಾಳಜಿಗೆ ತಾವೆಲ್ಲರೂ ಕೈಜೋಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಲ್ಲಾ ಸೌಕರ್ಯಗಳನ್ನು ಮಾಡಿಕೊಟ್ಟ ಜಿಲ್ಲಾಡಳಿತಕ್ಕೆ ಅಭಿನಂದನೆ ತಿಳಿಸಿದರು.
ಸಮಾರೋಪ ವೇಳೆ ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ, ಟಾಣಿಕ್, ಸೇರಿದಂತೆ ಔಷಧಿ ಕಿಟ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಕುಮಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ನಾಗರಾಜ್, ಉಷಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ.ಹೆಚ್ ದಾಸಪ್ಪನವರ, ಐಸಿಡಿಎಸ್ ಮೇಲ್ವಿಚಾರಕಿಯರಾದ ಮಹೇಶ್ವರಿ, ಸುಶೀಲಾ, ಚಂದುಬಾಯಿ, ಪ್ರಮೀಳಾ, ಮಂಜುಳಾ, ಮರಿಲಮ್ಮ, ಸಾಯಿಪ್ರಭ,  ಕಾತ್ಯಾಯನಿ, ನಂದಿನಿ ಹಾಗೂ ಸಿಬ್ಬಂದಿಯವರಾದ ಶಿವಕುಮಾರ, ಬಸವರಾಜ, ಹೊನ್ನುರಸ್ವಾಮಿ, ರಾಘವೇಂದ್ರ, ನಾಗೇಶ ಸೇರಿದಂತೆ ತಾಯಂದಿರು ಮತ್ತು ಮಕ್ಕಳು ಉಪಸ್ಥಿತರಿದ್ದರು.

One attachment • Scanned by Gmail