ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.30: ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆ ಮತ್ತು ಆರೈಕೆಗಾಗಿ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಬಾಲ ಚೈತನ್ಯ ಕಾರ್ಯಕ್ರಮದಡಿ ಮಕ್ಕಳ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ, ಇಲ್ಲಿ ಮಕ್ಕಳ ಬೆಳವಣಿಗೆಗೆ ಬೇಕಾದ ಪೂರಕ ಆಹಾರ ಮತ್ತು ಚಿಕಿತ್ಸೆಯನ್ನು ನೀಡಿರುವ ಪರಿಣಾಮ, ಮಕ್ಕಳ ತೂಕದಲ್ಲಿ ಒಂದರಿಂದ ಒಂದೂವರೆ ಕೆ.ಜಿ.ಹೆಚ್ಚಾಗಿದೆ. ಎಂದು ಜಿ.ಪಂ. ಸಿಇಒ ರಾಹುಲ್ ಎಸ್. ಸಂಕನೂರು ತಿಳಿಸಿದರು.
ನಗರದ ಸಮಾಜ ಕಲ್ಯಾಣ ವಸತಿ ನಿಲಯದಲ್ಲಿ ಜಿಲ್ಲಾಡಳಿತ, ಜಿ.ಪಂ. ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಮ್ಸ್ ಮಕ್ಕಳ ವಿಭಾಗ, ಜಿಲ್ಲಾಸ್ಪತ್ರೆ ಮತ್ತು ಭಾರತೀಯ ಶಿಶುವೈದ್ಯ ತಜ್ಞಾ ಸಂಘ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಅಪೌಷ್ಠಿಕ ಮಕ್ಕಳ ಆರೈಕೆಗಾಗಿ ಬಾಲಚೈತನ್ಯ ಕಾಠ್ಯಕ್ರಮದ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಅವರನ್ನು ಆರೋಗ್ಯವಂತ ಮಕ್ಕಳನ್ನಾಗಿ ಮಾಡಲು ಬಾಲಚೈತನ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮದಡಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ತಾಯಂದಿರೊಂದಿಗೆ ಸೇರಿಸಿಕೊಂಡು ಚಿಕಿತ್ಸೆಯೊಂದಿಗೆ ಉತ್ತಮ ಆಹಾರವನ್ನು ನೀಡಲಾಗಿದೆ, ಅದರೊಟ್ಟಿಗೆ ತಾಯಂದಿರಿಗೆ ಉತ್ತಮ. ಪೌಷ್ಠಿಕ ಆಹಾರ ತಯಾರಿಸುವ ಬಗ್ಗೆ ತರಬೇತಿಯನ್ನೂ ನೀಡಲಾಗಿದೆ. ಬರುವ ವರ್ಷದಲ್ಲಿ ಯಾವುದೇ ಮಕ್ಕಳು ಅಪೌಷ್ಠಿಕತೆಯಿಂದ ಇಂತಹ ಬಾಲ ಚೈತನ್ಯ ಕಾರ್ಯಕ್ರಮಕ್ಕೆ ಬರಬಾರದು ಎನ್ನುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಉತ್ತಮವಾದ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ತಾ.ಪಂ.ಇಒ, ಮಡಗಿನ ಬಸಪ್ಪ, ಸಿ.ಡಿ.ಪಿ.ಒ ಪ್ರದೀಪ್, ಟಿ.ಎಚ್.ಓ. ಡಾ.ಈರಣ್ಣ, ಆರೋಗ್ಯ ಶಿಕ್ಷಣ ಅಧಿಕಾರಿ ಖಾಸಿಂ , ಅಂಗನವಾಡಿ ಮೇಲ್ವಿಚಾರಕರಾದ ಮಹಾದೇವಮ್ಮ, ಗಂಗಮ್ಮ ಗಂಗಮ್ಮ ಗುಣ್ಣವರ್, ಡಾ.ಶಶಿಕುಮಾರ್ ಇದ್ದರು.