ಬಾಲ ಕಾರ್ಮಿಕ ಪದ್ಧತಿ ಪಿಡುಗು ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ: ಮುರಗಿ

ವಿಜಯಪುರ:ಜೂ.13: ಬಾಲ ಕಾರ್ಮಿಕ ಪದ್ಧತಿಯ ಸಂಪೂರ್ಣ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ್ ಮುರಗಿ ಹೇಳಿದರು.
ನಗರದ ಸಂತ ಅನ್ನಮ್ಮನವರ ದೇವಾಲಯದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತಮ ಗುಣಮಟ್ಟದ ಆರೋಗ್ಯ, ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದ್ದು, ಇದನ್ನು ಉತ್ತಮಪಡಿಸುವುದರಿಂದ ಸುಭದ್ರ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗುವುದು. ಬಾಲಕಾರ್ಮಿಕ ಪದ್ದತಿಯನ್ನು ಅಡಿಪಾಯದಿಂದಲೇ ನಿರ್ಮೂಲನೆಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶಂಕರ ಮಾರಿಹಾಳ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯಕವಾಗಿದೆ. ಮಕ್ಕಳಿಗೆ ಗುಣಮಟ್ಟದÀ ಶಿಕ್ಷಣ ಒದಗಿಸಬೇಕು. ಬಾಲಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಪೊಲೀಸ್ ಇಲಾಖೆಯೊಂದಿಗೆ ಇತರ ಎಲ್ಲಾ ಇಲಾಖೆಗಳು ಶ್ರಮಿಸುತ್ತಿವೆ. ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಮಕ್ಕಳ ಸಹಾಯವಾಣಿ-1098 ಹಾಗೂ ಸಹಾಯವಾಣಿ-112ಕ್ಕೆ ಕರೆ ಮಾಡಿ ಮಾಹಿತಿ ನೀಡಿದಲ್ಲಿ ಮಕ್ಕಳ ರಕ್ಷಣೆಯ ಕಾರ್ಯ ಮಾಡಲಾಗುವುದೆಂದು ಅವರು ತಿಳಿಸಿದರು.
ಫಾದರ್ ಟಿಯೋಲ್ ಮಚಾದೋ ಅವರು, ಸಮಗ್ರ ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯವೂ ಆಗಿದೆ. ಬಾಲಕಾರ್ಮಿಕ ಪದ್ದತಿಯ ಪಿಡುಗು ಮಕ್ಕಳ ತಮ್ಮ ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಕಸಿದುಕೊಳ್ಳುತ್ತಿದ್ದು, ಬಾಲಕಾರ್ಮಿಕ ಪದ್ದತಿಯ ನಿರ್ಮೂಲನೆ ಮಾಡಬೇಕೆಂದರು.
ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಜಿಲ್ಲೆಯಲ್ಲಿ ತರಬೇತಿ, ತಪಾಸಣೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ 1028 ವಿವಿಧ ಉದ್ದಿಮೆಗಳ ಹಾಗೂ ವಾಣಿಜ್ಯ ಸಂಸ್ಥೆ ತಪಾಸಣೆಗಳನ್ನು ಕೈಗೊಳ್ಳಲಾಗಿದೆ. 11 ಬಾಲಕಾರ್ಮಿಕರ ರಕ್ಷಣೆ ಮಾಡಲಾಗಿದೆ. 30 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಎಂದು ಯೋಜನಾ ನೀರ್ದೆಶಕರಾದ ಶ್ರೀಮತಿ ನೀಲಮ್ಮ ಖೇಡಗಿ ಹೇಳಿದರು.
2022-23ನೇ ಸಾಲಿನಲ್ಲಿ ಅತ್ಯಧಿಕ ಪ್ರಕರಣ ದಾಖಲಿಸುವುದರ ಜೊತೆಗೆ ಮಾಲೀಕರಿಂದ ದಂಡ ವಸೂಲಿ, ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಕ್ರಮ ವಹಿಸಿ, ಮಕ್ಕಳನ್ನು ರಕ್ಷಣಾ ಕಾರ್ಯ ಮಾಡಿರುವ ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಜಗದೇವಿ ಸಜ್ಜನ ಇವರನ್ನು ಸನ್ಮಾನಿಸಲಾಯಿತು. ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನದ ಅಂಗವಾಗಿ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಲಾಯಿತು.
ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆ ಉಪ ನಿರ್ದೇಶಕರಾದ ಕೆ. ಕೆ ಚವ್ಹಾಣ, ಮಕ್ಕಳ ಕಲ್ಯಾಣ ಸಮಿತಿಯ ಅದ್ಯಕ್ಷರಾದ ಎಸ್.ಜಿ ಕುಲಕರ್ಣಿ, ಯೋಜನಾ ನಿರ್ದೇಶಕರು ಸುನಂದ ತೋಳಬಂದಿ ಕಾರ್ಮಿಕ ಅಧಿಕಾರಿ ಎಸ್. ಜಿ ಖೈನೂರ, 2ನೇ ವೃತ್ತದÀ ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಜಗದೇವಿ ಸಜ್ಜನ ಬಾಳಪ್ಪ ಅರ್ಜಿ ಹಾಗೂ ರಾಜು ದಂಡಾವತಿ ಉಪಸ್ಥಿತರಿದ್ದರು.
ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನದ ಅಂಗವಾಗಿ ಜಾಗೃತಿ ಜಾಥಾಗೆ ಚಾಲನೆ: ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಅಪರ ಜಿಲ್ಲಾಧಿಕಾರಿಗಳು ಮಹಾದೇವ ಮುರಗಿ ಅವರು ಚಾಲನೆ ನೀಡಿದರು. ಜಾಥಾವು ಗಾಂಧಿ ಚೌಕ್ ಶ್ರೀ ಸಿದ್ಧೇಶ್ವರ ದೇವಸ್ಥಾನ ಮೂಲಕ ವಿವಿಧ ಮಾರ್ಗಗಳಲ್ಲಿ ಸಂಚರಿಸಿತು. ವಿಜಯಪುರ ನಗರದ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ,ದುಡಿಮೆ ಬೇಡ ಶಿಕ್ಷಣ ಬೇಕು, ದುಡಿಸಿಕೊಳ್ಳುವ ಮಾಲೀಕರಿಗೆ ದಿಕ್ಕಾರ, ನಟ್ ಬೋಲ್ಟ್ ಸಾಕು, ಪಾಟಿ ಪೆನ್ಸಿಲ್ ಬೇಕು ಎಂಬ ಘೋಷ ವಾಕ್ಯ ಹೇಳಲಾಯಿತು.
ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳು, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು, ವಿವಿಧ ಶಾಲಾ ಶಿಕ್ಷಕರು ಸರ್ಕಾರಿ ಬಾಲಕರ ಪ್ರೌಡಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ, ಸಿಕ್ಯಾಬ್ ಸೆಂಕೆಂಡರಿ ಪ್ರೌಡಶಾಲೆ ನವಭಾಗ, ಬಿ.ಡಿ.ಇ ಸೊಸೈಟಿ ಬಾಲಕಿಯರ ಪ್ರೌಡಶಾಲೆ, ಸಿಕ್ಯಾಬ್ ಮಾಡರ್ನ ಕನ್ನಡ ಮಾಧ್ಯ್ಯಮ ಪ್ರೌಡಶಾಲೆ, ಸಿಕ್ಯಾಬ್ ಬಾಲಕಿಯರ ಚಾಂದ ಬಿಬಿ ಪ್ರೌಡಶಾಲೆ ನವಬಾಗ, ವಿ.ಬಿ ದರ್ಬಾರ ಪ್ರೌಡಶಾಲೆ, ಡಿ.ಎನ್ ದರ್ಬಾರ ಪ್ರೌಡಶಾಲೆ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.