ಬಾಲ ಕಾರ್ಮಿಕ ಪದ್ಧತಿ ನಿಮೂಲನೆ, ಪುನರ್ವಸತಿ ಸಭೆ


ನವಲಗುಂದ,ಅ.13: ನಗರದಲ್ಲಿರುವ ಅಂಗಡಿ ಹೋಟೆಲ್, ಬೇಕರಿ ಗ್ಯಾರೇಜ್, ಬಾರ್ ಮತ್ತು ರೆಸ್ಟೋರೆಂಟ್ ಮುಂತಾದ ಕಡೆಗಳಲ್ಲಿ 18 ವರ್ಷದ ಒಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಬಹುದು ಎಂದು ತಹಶೀಲ್ದಾರ್ ಸುಧೀರ್ ಸಾಹುಕಾರ್ ತಿಳಿಸಿದರು.
ಅವರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಪುನರ್ವಸತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ಬಾಲ ಕಾರ್ಮಿಕ ಮಕ್ಕಳನ್ನು ನೇಮಿಸಿಕೊಂಡ ಮಾಲಕರಿಗೆ ಶಿಕ್ಷೆಗೆ ಕಾನೂನಿನಲ್ಲಿ ಅವಕಾಶವಿದೆಯೆಂದು ತಿಳಿಸಿದರು.
ಕಾರ್ಮಿಕ ನಿರೀಕ್ಷಕರು ತಪಾಸಣೆಯನ್ನು ಕೈಗೊಳ್ಳಬೇಕು ಹಾಗೂ ಸಮೀತಿ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಬರುವ ಇಲಾಖೆಯವರು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ, ಆರೋಗ್ಯ ಇಲಾಖೆ, ತಾಲೂಕು ಪಂಚಾಯತ್, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.