ಬಾಲ ಕಾರ್ಮಿಕ ಪದ್ಧತಿ ಕಡಿವಾಣ: ಕ್ರಮಕ್ಕೆ ಡಿಸಿ ಸೂಚನೆ

ಕೋಲಾರ, ಜೂ,೧೩-ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟಲು ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ನಗರದ ಸುವರ್ಣ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕರ ಇಲಾಖೆ, ವಕೀಲರ ಸಂಘ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಅತೀ ಕಡಿಮೆ ಹಣದಲ್ಲಿ ಅಕ್ರಮವಾಗಿ ದುಡಿಸಿ ಕೊಳ್ಳಬಹುದು ಎಂಬ ದುರುದ್ದೇಶದಿಂದ ಮಾಲೀಕರು ಇಂತಹ ಬಾಲ ಕಾರ್ಮಿಕರನ್ನು ನೇಮಿಸಿಕೊಂಡು ಅವರನ್ನು ಬೇಕರಿ, ಗ್ಯಾರೇಜ್, ಹೊಟೇಲ್, ಕಾರ್ಖಾನೆಗಳು, ಸಿರಿವಂತರ ಮನೆಗಳಲ್ಲಿ ಕೆಲಸದಾಳುಗಳಾಗಿ, ಕಟ್ಟಡ ನಿರ್ಮಾಣ ಕಾರ್ಮಿಕರಾಗಿ, ಕೃಷಿ ಜಮೀನಿನಲ್ಲಿ ಕೂಲಿಗಳಾಗಿ, ಅಂಗಡಿ ಮಳಿಗೆಗಳಲ್ಲಿ, ಗಾಮೆಂಟ್ಸ್‌ಗಳಲ್ಲಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ಕಷ್ಟವಾಗುವ ಕೆಲಸಗಳನ್ನು ಮಾಡಿಸುತ್ತಿದ್ದು, ಇಂತಹ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ನಿರ್ಮೂಲನೆ ಗೊಳಿಸಬೇಕು ಎಂದು ತಿಳಿಸಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಎನ್.ಬಾಲಚಂದ್ರ ಭಟ್ ಮಾತನಾಡಿ, ಬಾಲ್ಯದಲ್ಲಿ ಆಟವಾಡುತ್ತ ತನ್ನ ಜೊತೆಗಾರರೊಂದಿಗೆ ಶಾಲೆಗೆ ಹೋಗಿ ಕಲಿಯಬೇಕಾದ ಮಕ್ಕಳು ಹಲವಾರು ಕಾರಣಗಳಿಂದ ಹಾಗೂ ಸಮಸ್ಯೆಗಳಿಂದ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದು ಒಂದು ಸಾಮಾಜಿಕ ಪಿಡುಗು. ಕಟ್ಟಡಗಳ ಕೆಲಸಗಳಲ್ಲಿ, ಅಂಗಡಿ ಮಳಿಗೆಗಳಲ್ಲಿ, ಗಾಮೆಂಟ್ಸ್‌ಗಳಲ್ಲಿ, ಬೇಕರಿಗಳಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮ ಬರೀ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ ವರ್ಷದ ೩೬೫ ದಿನ ಹಾಗೂ ೨೪*೭ ನಮ್ಮ ಸುತ್ತಮುತ್ತಲು ಬಾಲಕಾರ್ಮಿಕರಾಗಿ ದುಡಿಯುತ್ತಿರುವಂತಹ ಮಕ್ಕಳು ಕಂಡುಬಂದಲ್ಲಿ ಅವರ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷರಾದ ಮುನೇಗೌಡ ಅವರು ಮಾತನಾಡಿ. ಬಾಲ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುವುದು ಅಪರಾಧ ಎಂದು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್ ಹೊಸಮನಿ ಅವರು ಎಲ್ಲಾ ಶಾಲಾ ಮಕ್ಕಳಿಗೂ ಪ್ರಮಾಣ ವಚನವನ್ನು ಬೋಧಿಸಿದರು. ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತವಾಗಿ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶುಕ್ಲಾಕ್ಷ ಪಾಲನ್ ಚಾಲನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ.ಎಂ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಪ್ಪ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ.ವಿ, ಜಿಲ್ಲಾ ಕಾರ್ಮಿಕರ ಅಧಿಕಾರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸದಸ್ಯ ಕಾರ್ಯದರ್ಶಿ ಶಬಾನಾ ಅಜ್ಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.