ತಿ.ನರಸೀಪುರ: ಜೂ.29:- ಬಡವರು ಜೀವನ ನಿರ್ವಹಣೆಗಾಗಿ ತಮ್ಮ ಹದಿಹರೆಯದ ಮಕ್ಕಳನ್ನು ಕೂಲಿಗೆ ಹಚ್ಚುತ್ತಿರುವುದರಿಂದ ಪ್ರಸ್ತುತ ದಿನಗಳಲ್ಲೂ ಬಾಲ ಕಾರ್ಮಿಕ ಪದ್ದತಿ ಚಾಲ್ತಿಯಲ್ಲಿದೆ.ಬಾಲ ಕಾರ್ಮಿಕ ಪದ್ದತಿಯಿಂದ ಹಲವು ಬಡ ಪ್ರತಿಭಾನ್ವಿತ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೆ.ಎನ್. ವೆಂಕಟೇಶ್ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ವಕೀಲರ ಸಂಘ, ಕಾರ್ಮಿಕ ಇಲಾಖೆ,ಶಿಕ್ಷಣ ಇಲಾಖೆ ಮತ್ತು ಪೆÇಲೀಸ್ ಇಲಾಖೆಯ ಸಹಯೋಗದಲ್ಲಿ
ಹಮ್ಮಿಕೊಂಡಿದ್ದ ಕಾನೂನು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬಾಲ ಕಾರ್ಮಿಕ ಪದ್ದತಿಯು ಒಂದು ಸಾಮಾಜಿಕ ಪಿಡುಗು.ಇದರಿಂದ ಹಲವು ಪ್ರತಿಭಾನ್ವಿತ ಬಾಲಕ-ಬಾಲಕಿಯರ ಭವಿಷ್ಯ ಹಾಳಾಗುತ್ತಿದೆ.ಚಿಕ್ಕಂದಿನಲ್ಲೇ ಮಕ್ಕಳನ್ನು ಕೆಲಸಕ್ಕೆ ಹಚ್ಚುವುದರಿಂದ ಅವರಿಗೆ ಶಿಕ್ಷಣದ ಆಸಕ್ತಿ ಕ್ಷೀಣವಾಗಲಿದೆ.ಹಾಗಾಗಿ ಸಮಾಜದಲ್ಲಿ ಚಾಲ್ತಿಯಲ್ಲಿರುವ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಎಲ್ಲ ಸ್ತರದ ಜನತೆ ಶ್ರಮಿಸಬೇಕು ಎಂದು ನ್ಯಾಯಾಧೀಶರು ತಿಳಿಸಿದರು.
ತಾಲೂಕು ಕಾರ್ಮಿಕ ನೀರಿಕ್ಷಕ ರಾಜಣ್ಣ ಮಾತನಾಡಿ,14 ವರ್ಷಕ್ಕಿಂತ ಕೆಳಪಟ್ಟ ಬಾಲಕ ಮತ್ತು ಬಾಲಕಿಯರನ್ನು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ.ಅಂತಹ ಮಕ್ಕಳನ್ನು ರಕ್ಷಿಸಿ ಮೂಲಭೂತ ಹಕ್ಕಾದ ಶಿಕ್ಷಣವನ್ನು ಅವರಿಗೆ ನೀಡಬೇಕು.ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತಂದು ಶಿಕ್ಷಣ ಕೊಡಿಸುವುದರ ಜೊತೆ ಶಿಕ್ಷಣದ ಮೌಲ್ಯವನ್ನು ಅವರಿಗೆ ತಿಳಿಸಬೇಕು ಎಂದರು.
ಶಾಲಾ ಮಕ್ಕಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಘೋಷಣೆ ಕೂಗುವುದರ ಮೂಲಕ ಜನರಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಫಾಲಾಕ್ಷಮೂರ್ತಿ, ಕಾರ್ಮಿಕ ನಿರೀಕ್ಷಕ ಗಂಗಾಧರ್,ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರನಾಯಕ್ , ಪಿಎಸ್‍ಐ ಪಚ್ಚೇಗೌಡ,ಆಡಳಿತ ಸಹಾಯಕ ಮಾದಪ್ಪ ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕ ಇಲಾಖೆ ಸಿಬ್ಬಂದಿ ವರ್ಗ ಹಾಜರಿದ್ದರು.