ಬಾಲ ಕಾರ್ಮಿಕರ ಬಳಕೆಯಾಗುತ್ತಿರುವುದು ವಿರೋಧಿ ನೀತಿಯಾಗಿದೆ: ನ್ಯಾ. ಸತೀಶ

ಬ್ಯಾಡಗಿ,ಜೂ19: ದೇಶದಲ್ಲಿ ಸಧೃಡ ಸಮಾಜ ಕಟ್ಟಲು ಬಾಲಕಾರ್ಮಿಕರ ಬಳಕೆಯಾಗುತ್ತಿರುವುದು ವಿರೋಧಿ ನೀತಿಯಾಗಿದ್ದು,ಇವುಗಳ ಬಗ್ಗೆ ಜಾಗೃತಿ ವಹಿಸಿ ಮಕ್ಕಳನ್ನ ವಿದ್ಯಾಭ್ಯಾಸಕ್ಕೆ ನಿಯೋಜಿಸಬೇಕಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಎಸ್.ಟಿ.ಸತೀಶ ಹೇಳಿದರು.

ಪಟ್ಟಣದ ಎಸ್‍ಎಸ್‍ಪಿಎನ್ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕಾ ನ್ಯಾಯವಾದಿಗಳ ಸಂಘ, ತಾಲೂಕಾ ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಎಸ್‍ಎಸ್‍ಪಿಎನ್ ಪ್ರೌಢಶಾಲೆ ಬ್ಯಾಡಗಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಮತ್ತು ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ದೆಸೆಯಲ್ಲಿ ಮೋಜು ಮಸ್ತಿ ಮಾಡಲು ಹಣ ಬೇಕಾಗಿರುವುದರಿಂದ,ಇಂತಹ ಸಣ್ಣ-ಪುಟ್ಟ ಕೆಲಸಗಳಿಗೆ ವಿನಿಯೋಗಿಸಿಕೊಳ್ಳುತ್ತಾರೆ. ಈ ಬಗ್ಗೆ ಜಾಗೃತಿ ವಹಿಸಿ ಮಕ್ಕಳ ಉತ್ತಮ ಭವಿಷ್ಯಕ್ಕೆ ದಾರಿದೀಪವಾಗಬೇಕಾಗಿದೆ ಎಂದರು.

ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ದಿವಾಣಿ ನ್ಯಾಯಾಧೀಶರಾದ ಸುರೇಶ ವಗ್ಗನವರ ಮಾತನಾಡಿ, ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಯಾಗಿದ್ದರೂ ಜನ ಉಪಯೋಗಿಸುತ್ತಿರುವುದು ದುರಂತ. ಸಿಗರೇಟಿನಲ್ಲಿ ನಿಕೋಟಿನ್ ಅಂಶವಿದ್ದು, ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಶೇ.70ರಷ್ಟು ಜನ ತಂಬಾಕು ಸೇವಿಸಿ ಕ್ಯಾನ್ಸರ್ ಹಾಗೂ ಇತರ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಕುರಿತು ವ್ಯಾಪಕ ಪ್ರಚಾರ ಮಾಡಿ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಈ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಿ ಜನರನ್ನು ತಂಬಾಕು ಸೇವನೆಯಿಂದ ಮುಕ್ತಗೊಳಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್.ಬಾರ್ಕಿ ವಹಿಸಿದ್ದರು. ಅತಿಥಿಗಳಾಗಿ ತಹಶೀಲ್ದಾರ ಎಸ್.ಎ.ಪ್ರಸಾದ್, ಕಾರ್ಮಿಕ ನಿರೀಕ್ಷಕರಾದ ಕು.ಮೀನಾಕ್ಷಿ ಸಿಂಧಿಹಟ್ಟಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಜಣ್ಣ ನ್ಯಾಮತಿ, ಕೆ.ಆರ್.ಲಮಾಣಿ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಜಿ.ಹಿರೇಮಠ, ಕಾರ್ಯದರ್ಶಿ ಮಂಜುನಾಥ ಹಂಜಗಿ, ಸಹ ಕಾರ್ಯದರ್ಶಿ ಎನ್.ಬಿ.ಬಳೆಗಾರ, ತಾಲೂಕಾ ನೌಕರರ ಸಂಘದ ಅಧ್ಯಕ್ಷ ಮಹಾದೇವ ಕರಿಯಣ್ಣನವರ, ಆರೋಗ್ಯ ಶಿಕ್ಷಣಾಧಿಕಾರಿ ಮಮತಾ ವಿ. ಮುಖ್ಯಶಿಕ್ಷಕ ಸುಭಾಷ ಎಲಿ, ವಕೀಲರಾದ ಭಾರತಿ ಕುಲಕರ್ಣಿ, ಎಸ್.ಎಸ್.ಕೊಣ್ಣೂರ, ಎಂ.ಜೆ.ಪಾಟೀಲ, ಪ್ರಸನ್ನ ಬಾರ್ಕಿ, ನಿಂಗಪ್ಪ ಮೋಟೆಬೆನ್ನೂರ, ಸೇರಿದಂತೆ ಕಾರ್ಮಿಕ ಇಲಾಖೆ ಸಿಬ್ಬಂದಿ ಮತ್ತು ನ್ಯಾಯಾಂಗ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.