ಬಾಲ ಕಾರ್ಮಿಕನ ರಕ್ಷಣೆ: ಇಟ್ಟಂಗಿ ಭಟ್ಟಿ ಮಾಲೀಕನ ವಿರುದ್ಧ ಎಫ್‍ಐಆರ್

ಕಲಬುರಗಿ,ಡಿ.21-ಬಬಲಾದ ರಸ್ತೆಯ ಮಾಸನಳ್ಳಿಯಲ್ಲಿರುವ ಮಹೆಬೂಬ್ ಬ್ರಿಕ್ಸ್ ಇಂಡಸ್ಟ್ರೀಸ್ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ 15 ವರ್ಷದ ಬಾಲಕನನ್ನು ರಕ್ಷಣೆ ಮಾಡಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇಟ್ಟಂಗಿ ಭಟ್ಟಿ ಮಾಲೀಕನ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಿದೆ.
ಹಿರಿಯ ಕಾರ್ಮಿಕ ನಿರೀಕ್ಷಕರಾದ ಕವಿತಾ ಹೊನ್ನಳ್ಳಿ, ರವೀಂದ್ರಕುಮಾರ, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಬಸವರಾಜ ಟೇಂಗಳಿ, ತಂಡದ ಸದಸ್ಯರಾದ ಅನುಸೂಯಾ ಹುಲ್ಲೂರ, ಸಮಾಜ ಕಾರ್ಯಕರ್ತ ಗೌರಿಶಂಕರ, ಆಪ್ತ ಸಮಾಲೋಚಕಿ ಸುಮಂಗಲಾ ಅವರನ್ನೊಳಗೊಂಡ ಮಕ್ಕಳ ರಕ್ಷಣಾ ಘಟಕದ ತಂಡ ಬಬಲಾದ ರಸ್ತೆಯ ಮಾಸನಹಳ್ಳಿಯಲ್ಲಿರುವ ಮೆಹಬೂಬ್ ಬ್ರಿಕ್ಸ್ ಇಂಡಸ್ಟ್ರೀಸ್ ಮೇಲೆ ದಾಳಿ ನಡೆಸಿ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ 15 ವರ್ಷದ ಬಾಲಕನನ್ನು ರಕ್ಷಣೆ ಮಾಡಿದೆ. ಈ ಬಾಲಕ ಕಳೆದ ಹದಿನೈದು ದಿನಗಳಿಂದ ಶಾಲೆಗೆ ಗೈರು ಹಾಜರಾಗಿ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಬಾಲಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿ ಸರ್ಕಾರಿ ಬಾಲಕರ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ.
ಬಾಲಕನನ್ನು ಇಟ್ಟಂಗಿ ಭಟ್ಟಿಯಲ್ಲಿ ಕೆಲಸಕ್ಕೆ ಇರಿಸಿಕೊಂಡ ಆರೋಪದ ಮೇಲೆ ಮೆಹಬೂಬ್ ಬ್ರಿಕ್ಸ್ ಇಂಡಸ್ಟ್ರೀಸ್ ಮಾಲೀಕ ಮೆಹಬೂಬ್ ಟೇಂಗಳಿ ವಿರುದ್ಧ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ), ಕಾರ್ಮಿಕ ಕಾಯ್ದೆ-1986 ಹಾಗೂ ತಿದ್ದುಪಡಿ ಕಾಯ್ದೆ-2016 ಮತ್ತು ಕಲಂ 79 ಬಾಲ ನ್ಯಾಯ ಕಾಯ್ದೆ-2015ರ ಅನ್ವಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಿದೆ.