ಬಾಲ್ಯ ಸ್ನೇಹಿತ ಪರಾಗ್ ಗೆ ಶುಭ ಕೋರಿದ ಶ್ರೇಯಾ

ಮುಂಬೈ, ಡಿ ೧- ಟ್ವಿಟರ್ ಸಿಇಓ ಆಗಿ ನೇಮಕಗೊಂಡ ಬಾಲ್ಯ ಸ್ನೇಹಿತ ಪರಾಗ್ ಅಗರ್ವಾಲ್ ಅವರಿಗೆ ಪ್ರಸಿದ್ಧ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್ ಶುಭ ಕೋರಿದ್ದಾರೆ.

ಟ್ವಿಟರ್ಗೆ ನೂತನ ಸಿಇಓ ಆಗಿ ಭಾರತ ಮೂಲದ ಅಮೆರಿಕನ್ ಪರಾಗ್ ಅಗರ್ವಾಲ್ ನೇಮಕವಾಗಿದ್ದಾರೆ. ಈ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಭಾರತೀಯರಿಗೆ ಸಖತ್ ಖುಷಿ ಆಗಿದೆ. ಅಲ್ಲದೇ ಭಾರತದ ಮೂಲೆ ಮೂಲಗಳಿಂದ ಪರಾಗ್ ಅಗರ್ವಾಲ್ಗೆ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ.

ಅಭಿನಂದನೆಗಳು..! ಪರಾಗ್, ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತಿದ್ದೇನೆ. ಇದು ನಮ್ಮ ಪಾಲಿಗೆ ಅತ್ಯಂತ ಶುಭದಿನವಾಗಿದೆ. ಈ ಸುದ್ದಿಯನ್ನು ನಾವು ಸಂಭ್ರಮಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಶ್ರೇಯಾ ಘೋಷಾಲ್ ಹಾಗೂ ಪರಾಗ್ ಅಗರ್ವಾಲ್ ಆತ್ಮೀಯ ಸ್ನೇಹಿತರು. ಈ ಹಿಂದೆ ಶ್ರೇಯಾ ಘೋಷಾಲ್ ಹಾಗೂ ಪರಾಗ್ ಅಗರ್ವಾಲ್ ಒಟ್ಟಾಗಿ ಕ್ಲಿಕ್ಕಿಸಿಕೊಂಡ ಫೋಟೋಗಳು ಇದೀಗ ವೈರಲ್ ಆಗ್ತಿವೆ. ಹಿಂದಿನ ಟ್ವೀಟ್ ಒಂದರಲ್ಲಿ ಶ್ರೇಯಾ, ಪರಾಗ್ಗೆ ಜನ್ಮ ದಿನದ ಶುಭಾಶಯವನ್ನು ಕೋರಿದ್ದಾರೆ. ಈ ಟ್ವೀಟ್ನಲ್ಲಿ ಶ್ರೇಯಾ ಪರಾಗ್ರನ್ನು ತಮ್ಮ ಬಾಲ್ಯ ದಿನದ ಸ್ನೇಹಿತ ಎಂದು ಕರೆದಿದ್ದಾರೆ.