ಬಾಲ್ಯ ವಿವಾಹ: 7 ಆರೋಪಿಗಳಿಗೆ ಶಿಕ್ಷೆ

ವಿಜಯಪುರ,ಏ.27:ಅಪ್ರಾಪ್ತ ಬಾಲಕಿಯನ್ನು ವಿವಾಹ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳಿಗೆ ವಿಜಯಪುರದ ಜೆ.ಎಮ್.ಎಫ್.ಸಿ ನ್ಯಾಯಾಲಯವು 1 ವರ್ಷ ಕಠಿಣ ಜೈಲು ಹಾಗೂ ರೂ. 10,000 ದಂಡ ವಿಧಿಸಿ ತೀರ್ಪು ನೀಡಿದೆ. ಇನ್ನೂ ಇಬ್ಬರೂ ಆರೋಪಿಗಳು ವಿಚಾರಣೆ ಬಾಕಿ ಇದ್ದ ಸಂದರ್ಭದಲ್ಲಿ ಮೃತರಾಗಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್, ವಿಜಯಪುರ ನಗರದ ಆದಿಲ್ ಶಾಹಿ ಮಂಗಲ ಕಾರ್ಯಾಲಯದಲ್ಲಿ 30-08-2018 ರಂದು ಗೋಡಿಹಾಳ ಕಾಲೋನಿಯ ಅಪ್ರಾಪ್ತ ಬಾಲಕಿಯನ್ನು ಸದ್ದಾಂ ಹುಸೇನ್ ಸಲೀಂ ಶೇಖ ಎಂಬ ಯುವಕನ ಜೊತೆ ಬಾಲ್ಯವಿವಾಹ ಮಾಡಿದ್ದರು. ಬಾಲ್ಯವಿವಾಹ ಮಾಡಿ, ಪ್ರೋತ್ಸಾಹಿಸಿದ ಹಾಗೂ ಭಾಗಿಯಾದ ಕಾಶಿಂಸಾಬ್ ಇಮಾಮ್‍ಸಾಬ ಶೇಖ, ರಾಜಾಬಿ ಕಾಶಿಂಸಾಬ್ ಶೇಖ, ಸದ್ದಾಂಹುಸೇನ್ ಸಲೀಂ ಶೇಖ, ಸಲೀಂ ಹುಸೇನ ಶೇಖ, ಮಜರ ಸಲೀಂ ಶೇಖ, ಶಹಜಾನ ರಂಜಾನ ಶೇಖ, ನಬಿರಸೂಲ ಖಾದರಪಟೇಲ್ ಸೀತನೂರ, ಅಬ್ದುಲರಜಾಕ್ ಭಾಷಾಸಾಬ ಬಿದ್ನಾಳ ಹಾಗೂ ಖಾಲಿದ ತಾಜುದ್ದೀನ ಪಟೇಲ ಹೀಗೆ ಒಟ್ಟು 09 ಜನರ ವಿರುದ್ದ 31-08-2018 ರಂದು ಗೋಲ್‍ಗುಂಬಜ್ ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ ಆಗಿನ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಿರ್ಮಲಾ ಸುರಪುರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮೌನೇಶ ಪೋತದಾರ, ಗುರುರಾಜ ಇಟಗಿ, ಮಕ್ಕಳ ಸಹಾಯವಾಣಿ 1098 ಸಂಯೋಜಕಿ ಸುನಂದಾ ತೋಳಬಂದಿ, ಮೀನಾಕ್ಷಿ ಕುಲಕರ್ಣಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶ್ರೀಧರ ಕುಲಕರ್ಣಿ, ಸಮಿತಿ ಸದಸ್ಯರಾದ ಯಲ್ಲಪ್ಪ ಇರಕಲ, ದಾನೇಶ ಅವಟಿ, ಹಾಗೂ ಆಗಿನ ಗೋಲ್‍ಗುಂಬಜ್ ಪೊಲೀಸ ಠಾಣೆ ಪಿ.ಎಸ್.ಐ ರಾಜಕುಮಾರ ಹಳ್ಳಿ ಹಾಗೂ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿ ಪೂನಮ್ ಪೋಳ ಹಾಗೂ ಈ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರ್ಯ ನಿರ್ವಹಿಸಿದ ಎಲ್ಲ ಸಿಬ್ಬಂದಿ ವರ್ಗದವರಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಆದ ಟಿ.ಭೂಬಾಲನ್ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.