ಬಾಲ್ಯ ವಿವಾಹ ತಡೆಗೆ ಜಾಗೃತಿ ಅಗತ್ಯ : ಪವಾರ

ಬಾಗಲಕೋಟೆ,ನ.4 : ಬಾಲ್ಯವಿವಾಹ ತಡೆಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಕಲಾದಗಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ ರವಿ ಪವಾರ ಹೇಳಿದರು.
ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ಗ್ರಾಮೀಣ ಪರಿಸರ ಮತ್ತು ಸಮುದಾಯ ಜಾಗೃತಿ ಸಂಸ್ಥೆ, ಸಿಂಧು ಮಕ್ಕಳ ಸಂಘ ಹಾಗೂ ಜಿಲ್ಲಾ ಮಕ್ಕಳ ಸಹಾಯವಾಣಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಬಾಲ್ಯ ವಿವಾಹ ನಿಷೇಧ ದಿನಾಚರಣೆ ಕಾರ್ಯಕ್ರಮವನ್ನು ಬಾಲ್ಯವಿವಾಹ ತಡೆಯ ಘೋಷವಾಕ್ಯಗಳನ್ನು ಗಿಡಕ್ಕೆ ಕಟ್ಟುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯ ವಿವಾಹ ಹೆಚ್ಚಾಗಲು ಹೆಣ್ಣು ಮಕ್ಕಳ ಬಗ್ಗೆ ಇರುವ ಬೇಜವಾಬ್ದಾರಿ ಇದಕ್ಕೆ ಕಾರಣವೆಂದರು.
ಹೆಣ್ಣು ಮಕ್ಕಳು ಕನಿಷ್ಠ ಪದವಿ ಶಿಕ್ಷಣ ಮುಗಿದ ನಂತರ ಮದುವೆ ವಿಚಾರಕ್ಕೆ ಹೊಗಬೇಕು. ಆಗ ಅವರ ಆಯ್ಕೆ ಹಾಗೂ ಪರಿಪಕ್ವತೆ ಹೊದಿರುತ್ತಾರೆ. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಪೆಬ್ರವರಿ 2020ರಲ್ಲಿ ತುಳಸಿಗೆರೆ ಗ್ರಾಮದಲ್ಲಿ 3 ಬಾಲ್ಯ ವಿವಾಹ ಮಾಡುವ ಸಾದ್ಯತೆ ಇದೆ ಎಂಬ ಮಾಹಿತಿ ಆಧಾರದ ಮೇಲೆ ಪ್ರೌಡಶಾಲೆಗೆ ಬೇಟಿ ನೀಡಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಪಾಲಕರಿಗೆ ಅರಿವು ನೀಡಿ ತಡಯಲಾಗಿದೆ ಎಂದರು ತಿಳಿಸಿದರು.
ಜಿಲ್ಲಾ ಮಕ್ಕಳ ಸಹಾಯವಾಣಿ-1098, ಪೋಲೀಸ್ ತುರ್ತು ದೂರವಾಣಿ ಸಂಖ್ಯೆ 112 ಈ ಸಂಖ್ಯೆಯನ್ನು ಬಳಸಿ ಮಕ್ಕಳ ಮೇಲೆ ಆಗುವ ತೊಂದರೆಗಳನ್ನು ತಪ್ಪಿಸಬಹುದು ಮತ್ತು ಬಾಲ್ಯ ವಿವಾಹ ಎಲ್ಲಿಯಾದರು ಕಂಡು ಬಂದರೆ ತಕ್ಷಣ ಮಾಹಿತಿಯನ್ನು ಕೊಡುವ ಜವಾಬ್ದಾರಿ ನಮ್ಮ ಕರ್ತವ್ಯವಾಗಬೇಕೆಂದು ತಿಳಿಸಿದರು. ಸರ್ಚ ಸಂಸ್ಥೆಯ ಸಂಯೋಜಕರಾದ ಜಿ.ಎನ್.ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ ನವೆಂಬರ್ 1, 2006 ರಂದು ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಂದಿದ್ದು, 2007 ರಲ್ಲಿ ಜಾರಿಗೆ ಬಂದಿರುತ್ತದೆ. 2018ರಲ್ಲಿ ತಿದ್ದುಪಡಿ ಮಾಡಲಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಂದು 14 ವರ್ಷಗಳಾಗಿದ್ದು ಇದರ ವಿಷೇಶವಾಗಿ ಆಚರಣೆ ಮಾಡಬೇಕು. ನವೆಂಬರ 1ನ್ನು ಬಾಲ್ಯ ವಿವಾಹ ನಿಷೇಧ ದಿನವನ್ನಾಗಿ ಆಚರಣೆ ಮಾಡುವ ಮೂಲಕ ಜನರಲ್ಲಿ ಹೆಚ್ಚು ಪರಿಣಾಮಕಾರಿಯಾದ ಜಾಗೃತಿಯನ್ನು ಮೂಡಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತುಳಸಿಗೇರಿ ಗ್ರಾಮ ಲೆಕ್ಕಾಧಿಕಾರಿ ಸಾಬಣ್ಣ ಹಳ್ಳಿ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಸುಧಾಕರ ಬಡೀಗೇರ, ಎಸ್.ಡಿ.ಎಂಸಿ ಅಧ್ಯಕ್ಷ ಶಂಕರ ದಾಸಣ್ಣನವರ, ಸಿಂಧು ಮಕ್ಕಳ ಸಂಘದ ಅನುಷ್ಕಾ ಹಲಗಲಿ ಸೇರಿದಂತೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಂಸ್ಥೆಯ ಸಿಬ್ಬಂದಿಗಳಾದ ರೇಖಾ ಬಡಿಗೇರ, ಶೈಲಜಾ, ಹಾಜರಿದ್ದರು.