ಬಾಲ್ಯ ವಿವಾಹಕ್ಕೆ ಆಸ್ಪದ ಕೊಡಬೇಡಿ ಶಿಕ್ಷೆಗೆ ಗುರಿಯಾಗಬೇಡಿ


ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಫೆ.15;: ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಯಾರು ಕೂಡ ಬಾಲ್ಯ ವಿವಾಹಕ್ಕೆ ಆಸ್ಪದ ಕೊಡಬಾರದು. ಬಾಲ್ಯ ವಿವಾಹ ಕಾರಣರಾದವರೆಲ್ಲರೂ ಶಿಕ್ಷೆ ಗುರಿಯಾಗುತ್ತಾರೆ ಎಂದು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಡಾ. ಜಿ.ಆರ್.ತಿಮ್ಮೇಗೌಡ ಹೇಳಿದರು.ಚಿತ್ರದುರ್ಗ ತಾಲೂಕಿನ ಸಿರಿಗೆರೆ ಅಕ್ಕಮಹಾದೇವಿ ಬಾಲಕಿಯರ ಪ್ರಸಾದ ನಿಲಯದಲ್ಲಿ ಆರೋಗ್ಯ ಇಲಾಖೆ ವತಿಯಿಂದ ವಸತಿ ನಿಲಯ ಪಾಲಕರು , ನಿವಾಸಿ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರಿಗೆ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ, ಹಾಗೂ ವಸತಿ ನಿಲಯಗಳಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದರು.ಚಿಕ್ಕ ವಯಸ್ಸಿಗೆ ಹೆಣ್ಣು ಮಕ್ಕಳ ಮದುವೆ ಮಾಡುವುದರಿಂದ ಆರೋಗ್ಯದ ಸಮಸ್ಯೆಯ ಜೊತೆಗೆ ಕಾನೂನು ಸಮಸ್ಯೆಗಳಿಗು ಗುರಿಯಾಗಬೇಕಾಗುತ್ತದೆ. ಮುಖ್ಯವಾಗಿ ಪಿ.ಯು.ವಿದ್ಯಾರ್ಥಿನಿಯರು ಇದರ ಬಗ್ಗೆ ತಿಳುವಳಿಕೆ ಹೊಂದಿರಬೇಕು ಎಂದರು.ಶೇಕಡ 50ರಷ್ಟು ಹೆಣ್ಣು ಮಕ್ಕಳಲ್ಲಿ ರಕ್ತ ಹೀನತೆ ತೊಂದರೆ ಕಂಡುಬರುತ್ತದೆ. ವಸತಿ ನಿಲಯಗಳಲ್ಲಿ ಸಣ್ಣಪುಟ್ಟ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರಲ್ಲಿ ಪರೀಕ್ಷೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುಬೇಕು. ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗಬಾರದು. ಸಮಯ ಸದುಪಯೋಗ ಪಡಿಸಿಕೊಂಡು ಚೆನ್ನಾಗಿ ಅಭ್ಯಾಸ ಮಾಡಿ ಯಾವುದೇ ಉದ್ವೇಗಕ್ಕೆ ಒಳಗಾಗದೆ ಧೈರ್ಯದಿಂದ ಪರೀಕ್ಷೆ ಹೆದರಿಸಬೇಕೆಂದರು. ಹಿಂದೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಲವು ವಿದ್ಯಾರ್ಥಿಗಳು ಅದೆಷ್ಟೋ ಜನ ಹೆಚ್ಚಿನ ಶ್ರಮ ಪಟ್ಟು ಅಭ್ಯಾಸ ಮಾಡಿ ಮುಂದೆ ಉನ್ನತ ಅಧಿಕಾರಿಗಳಾಗಿರುವ ಉದಾಹರಣೆಗಳಿವೆ. ಆದ್ದರಿಂದ ಜೀವನ ಸಿಗುವುದು ಒಂದೇ ಬಾರಿ, ಕಡಿಮೆ ಅಂಕ ಪಡೆದೆನೆಂದು ಚಿಂತಿಸದೇ, ಆತ್ಮಹತ್ಯೆಗೆ ಶರಣಾಗದೆ, ಮುಂದಿನ ಭವಿಷ್ಯಕ್ಕೆ ಭದ್ರಬುನಾದಿ ಹಾಕಿಕೊಳ್ಳಬೇಕೆಂದು ವಿದ್ಯಾರ್ಥಿನಿಯರಿಗೆ ಡಾ. ಜಿ.ಆರ್.ತಿಮ್ಮೇಗೌಡ ಕಿವಿಮಾತು ಹೇಳಿದರು.ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ ಹದಿಹರೆಯದ ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ, ಕಾಪಾಡಿಕೊಳ್ಳಬೇಕು. ಪರಿಸರ ಸ್ನೇಹಿ ಮೈತ್ರಿ ಕಪ್ ಔಷಧಿ ಮಳಿಗೆಗಳಲ್ಲಿ ಲಭ್ಯವಿದ್ದು ಇದರ ಬಳಕೆ ಮಾಡಬೇಕೆಂದರು. ಮೈತ್ರಿ ಕಪ್ ನ್ನು ಸಕಾಲಕ್ಕೆ ಸ್ವಚ್ಛಗೊಳಿಸುತ್ತಾ ಕನಿಷ್ಠ 8 ವರ್ಷದವರೆಗೆ ಬಳಸಬಹುದು ಹಾಗೂ ಗುಡ್ ಟಚ್ ಮತ್ತು ಬ್ಯಾಡ್ ಟಚ್ ಇವುಗಳ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.